ಬೆಂಗಳೂರು: ಆಡಳಿತದಲ್ಲಿ ಬೇರೆಯವರ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದರಿಂದ ಬಿಜೆಪಿ ಸರ್ಕಾರದ ಮೇಲೆ ಸಾರ್ವಜನಿಕರ ಅಭಿಪ್ರಾಯ ಹೋಗಿದೆ ಎಂದು ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಅವರು, ಮೈತ್ರಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿ ಬಂದಿದ್ದೇವೆ. ಆದರೆ, ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ ಇಲ್ಲೂ ಕೂಡ ಕಾಣುತ್ತಿದ್ದೇವೆ. ನಾನು ಯಾವುದೇ ಬಣದಲ್ಲೂ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಮಾತುಗಳನ್ನು ಹೇಳಿದ್ದೇನೆ ಎಂದರು.
ನಾಯಕತ್ವ ಬದಲಾಗಬೇಕು:
ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಮೊದಲು ಇದ್ದ ಶಕ್ತಿ ಇಲ್ಲ. ಅವರಿಗೆ ವಯಸ್ಸಾಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಚೈತನ್ಯ ಕೂಡ ಇಲ್ಲ. ಆದ್ದರಿಂದ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಎಂದರು.
ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅವರ ಸ್ಥಾನಕ್ಕೆ ಮತ್ತೊಬ್ಬ ಪಂಚಮಸಾಲಿ ವೀರಶೈವ ನಾಯಕರನ್ನು ಆಯ್ಕೆ ಮಾಡಿ, ಅವರೊಂದಿಗೆ ಉತ್ತಮ ಸಚಿವ ತಂಡ ಕೊಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಬಿಜೆಪಿಗೆ ಭವಿಷ್ಯ ಇರುತ್ತದೆ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.