ಚುಮು ಚುಮು ಚಳಿಗೆ ಸೂಪ್ ಇದ್ರೆ ಸೂಪರ್

    ಚಳಿಗಾಲದಲ್ಲಿ ಬಾಯಿಚಪಲ ತೀರಿಸುವ, ಆರೋಗ್ಯಕ್ಕೂ ಪೂರಕವಾದ ವಿವಿಧ ತರಕಾರಿ ಹಾಗೂ ಸೊಪ್ಪುಗಳಿಂದ ಮನೆಯಲ್ಲೇ ಸೂಪ್ ತಯಾರಿಸಿ ಸುಮ್ಮನೆ ಸವಿದುಬಿಡಿ. ನೀವು ಸೂಪರ್ ಅನ್ನದೇ ಇರುವುದಿಲ್ಲ ಜಸ್ಟ್ ಟ್ರೈ ಇಟ್.

ಟೊಮೇಟೋ ಸೂಪ್

ಬೇಕಾಗುವ ಸಾಮಗ್ರಿಗಳು:
ಟೊಮ್ಯಾಟೊ 2, ಕ್ಯಾರೆಟ್ 1, ಬೀನ್ಸ್ 4, ಕೊತ್ತಂಬರಿ ಸೊಪ್ಪು, ಈರುಳ್ಳಿ 1,  ಬೆಳ್ಳುಳ್ಳಿ 3 ಎಸಳು, ಲವಂಗ, ಕಾಳುಮೆಣಸು, ಬೆಣ್ಣೆ, ಮೆಣಸಿನಪುಡಿ, ಉಪ್ಪು, ರಸ್ಕ್

ಮಾಡುವ ವಿಧಾನ:
ಕ್ಯಾರೆಟ್ ಮತ್ತು ಬೀನ್ಸ್ ನ್ನು ಸಣ್ಣಗೆ ಹೆಚ್ಚಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಬೆಣ್ಣೆ ಕಾಯಿಸಿ ನಂತರ ಬೆಳ್ಳುಳ್ಳಿ, ಲವಂಗ, ಕಾಳುಮೆಣಸು ಹಾಕಿ ಹುರಿಯಬೇಕು. ಅನಂತರ ಈರುಳ್ಳಿ, ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಮೊದಲೇ ಬೇಯಿಸಿಟ್ಟುಕೊಂಡಿರುವ ಕ್ಯಾರೆಟ್, ಬೀನ್ಸ್ ನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಪುಡಿ, ಸಕ್ಕರೆ, ಸ್ವಲ್ಪ ನೀರು ಹಾಕಿ ಒಂದು‌ ಕುದಿ ಬರಿಸಬೇಕು. ತಣ್ಣಗಾದ ನಂತರ ಎಲ್ಲವನ್ನೂ ಮಿ‍ಕ್ಸಿ ಮಾಡಬೇಕು. ಅನಂತರ ಅಗತ್ಯವಿದ್ದಷ್ಟು ನೀರು ಹಾಕಿ ಕುದಿಸಬೇಕು. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಬೇಕು. ರಸ್ಕ್ ಅನ್ನು ಸೇರಿಸಿ ಕುಡಿಯಲು ಕೊಟ್ಟರೆ ರುಚಿಯಾದ ಟೊಮ್ಯಾಟೊ ಸೂಪ್ ಗೆ ರಂಗು ಬರುತ್ತದೆ.
ಕ್ಯಾರೆಟ್ ನಲ್ಲಿರುವ ‘ಸಿ’ ವಿಟಮಿನ್ ಕಣ್ಣಿನ ಆರೋಗ್ಯಕ್ಕೆ ಸಹಕಾರಿ.

ಬಸಳೆ-ನುಗ್ಗೆ ಸೊಪ್ಪು ಸೂಪ್

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು 10, ನುಗ್ಗೇ ಸೊಪ್ಪು ಚಿಗುರು, ಬೆಣ್ಣೆ, ಕಾಳುಮೆಣಸು 4, ಸೋಂಪು ಅರ್ಧ ಚಮಚ, ಉಪ್ಪು, ಮಜ್ಜಿಗೆ

ಮಾಡುವ ವಿಧಾನ: 
ಬಾಣಲೆಯಲ್ಲಿ ಬೆಣ್ಣೆ ಕಾಯಿಸಿಕೊಳ್ಳಬೇಕು. ಕಾಳುಮೆಣಸು, ಸೋಂಪು ಹಾಗೂ ಸೊಪ್ಪುಗಳನ್ನು ಹಾಕಿ ಹುರಿದುಕೊಳ್ಳಬೇಕು. ಸ್ವಲ್ಪ ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಜ್ಜಿಗೆಯನ್ನು ಸೇರಿಸಿ ಮಿಕ್ಸಿ ಮಾಡಬೇಕು. ಬೇಕಾದರೆ ನೀರನ್ನು ಸೇರಿಸಬಹುದು.
ಈ ಎರಡೂ ಸೊಪ್ಪುಗಳಲ್ಲೂ ಕಬ್ಬಿಣಾಂಶ ಹಾಗೂ ವಿಟಮಿನ್ ಎ ಇರುವುದರಿಂದ ಊಟದ ಮೊದಲು ಸೂಪ್ ಅನ್ನು ಸೇವಿಸಿದರೆ ಅರೋಗ್ಯಕ್ಕೆ ಒಳ್ಳೆಯದು.

 ಮಿಕ್ಸೆಡ್ ವೆಜ್ ಸೂಪ್

ಬೇಕಾಗುವ ಸಾಮಾಗ್ರಿಗಳು:
ಎಲೆಕೋಸು, ನೀರುಳ್ಳಿ, ಡೊಣಮೆಣಸು, ಕ್ಯಾರೆಟ್, ಜೋಳದ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಟೋಮೇಟೋ ಸಾಸ್, ಚಿಲ್ಲಿ ಸಾಸ್, ತುಪ್ಪ, ಉಪ್ಪು

ಮಾಡುವ ವಿಧಾನ:
ಎಲೆಕೋಸು, ನೀರುಳ್ಳಿ ಹಾಗೂ ಡೊಣಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಕ್ಯಾರೆಟ್ ನ್ನು ತುರಿದುಕೊಳ್ಳಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಕಾಯುತ್ತಿದ್ದಂತೆಯೇ ಕಾಳುಮೆಣಸಿನಪುಡಿ ಹಾಗೂ ಮೊದಲೇ ಹೆಚ್ಚಿಟ್ಟುಕೊಂಡ ಎಲೆಕೋಸು, ನೀರುಳ್ಳಿ, ಡೊಣಮೆಣಸು ಹಾಗೂ ಕ್ಯಾರೆಟ್ ಇವುಗಳನ್ನು ಹಾಕಿ ಹುರಿಯಬೇಕು. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಲ್ಲಿ ಸಾಸ್, ಟೊಮೇಟೊ ಸಾಸ್ ಹಾಗೂ ಲಭ್ಯವಿದ್ದರೆ ಸೋಯಾ ಸಾಸ್ ಸೇರಿಸಬೇಕು. ನಂತರ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಬೇಕು. ಜೋಳದ ಹಿಟ್ಟು ಅಥವಾ ಕಾರ್ನ್ ಫ್ಲೋರ್ ನ್ನು ನೀರಿನಲ್ಲಿ ಕದರಿ, ಕುದಿ ಬರುತ್ತಿದ್ದಂತೆ ಸೇರಿಸಬೇಕು. 5 ನಿಮಿಷ ಚೆನ್ನಾಗಿ ಕುದಿಯಲು ಬಿಟ್ಟರೆ ಬಿಸಿ ಬಿಸಿ ತರಕಾರಿ ಸೂಪ್ ಸವಿಯಲು ರೆಡಿ.

ದೊಡ್ಡಪತ್ರೆ-ಚಕ್ರಮುನಿ ಸೂಪ್

ಬೇಕಾಗುವ ಸಾಮಗ್ರಿಗಳು:
ದೊಡ್ಡಪತ್ರೆ ಅಥವಾ ಸಾಂಬಾರ್ ಬಳ್ಳಿ ಸೊಪ್ಪು 10, ಚಕ್ರಮುನಿ ಅಥವಾ ವಿಟಮಿನ್ ಸೊಪ್ಪು, ಈರುಳ್ಳಿ 1, ಟೊಮ್ಯಾಟೊ 1, ಲವಂಗ, ಮೆಣಸಿನಪುಡಿ, ಉಪ್ಪು, ಬೆಲ್ಲ, ಬೆಣ್ಣೆ

ಮಾಡುವ ವಿಧಾನ:
ಬಾಣಲೆಯಲ್ಲಿ ಬೆಣ್ಣೆ ಹಾಕಿ ಕಾಯಿಸಿಕೊಳ್ಳಬೇಕು. ಅದಕ್ಕೆ 3 ಲವಂಗ, ಸಣ್ಣಗೆ ಹೆಚ್ಚಿದ ನೀರುಳ್ಳಿ, ಟೊಮ್ಯಾಟೊ, ಸೊಪ್ಪುಗಳನ್ನು ಹಾಕಿ ಹುರಿಯಬೇಕು, ಸ್ವಲ್ಪ ನೀರು ಸೇರಿಸಿ ಕುದಿಬರುತ್ತಿದ್ದಂತೇ ಮೆಣಸಿನಪುಡಿ, ಉಪ್ಪು, ಬೆಲ್ಲ ಸೇರಿಸಬೇಕು. ಸ್ವಲ್ಪ ತಣಿದ ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಕುದಿಸಿ ಸಾಯಂಕಾಲ ಕುಡಿದರೆ ದೇಹಾರೋಗ್ಯ ವರ್ಧನೆಗೆ ಸಹಾಯಕಾರಿ. ಮಳೆಗಾಲದ ಉಂಟಾಗುವ ಥಂಡಿಗೆ ದೊಡ್ಡಪತ್ರೆ ರಾಮಬಾಣವಿದ್ದಂತೆ. ಹೆಸರೇ ಹೇಳುವಂತೆ ವಿಟಮಿನ್ ಸೊಪ್ಪು ಪೋಷಕಾಂಶಗಳನ್ನು ಹೊಂದಿದ್ದು ದಿನಕ್ಕೆ ಕನಿಷ್ಠ ಒಂದು ಎಲೆಯನ್ನಾದರೂ ತಿಂದರೆ ಒಳ್ಳೆಯದು.

ಚಿತ್ರ-ಬರಹ
ಬಿ.ಸಂ.ಸುವರ್ಚಲಾ