ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ 1 ಲಕ್ಷ ಉಚಿತ ಕೋವಿಡ್ ಲಸಿಕೆ ಕೊಡುಗೆ

ಬೆಂಗಳೂರು: ಕೋವಿಡ್-19 ವಿರುದ್ಧದ ಹೋರಾಟವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ಸರ್ಕಾರದ ಕೋವಿಡ್ ಲಸಿಕಾ ಅಭಿಯಾನಕ್ಕೆ 1 ಲಕ್ಷ ಉಚಿತ ಕೋವಿಡ್ ಲಸಿಕೆಗಳನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದೆ.

ಈ ಬಗ್ಗೆ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎ.ಪಿ. ಅಹ್ಮದ್ ಮಾತನಾಡಿ, ಕೋವಿಡ್-19 ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಡೀ ದೇಶ ಹೋರಾಟ ಮಾಡುತ್ತಿದೆ. ಈ ಸೋಂಕು ಹರಡುವುದನ್ನು ನಿಯಂತ್ರಿಸಲು ಲಸಿಕಾಕರಣ ಅತ್ಯಂತ ಮುಖ್ಯವಾಗಿದೆ. ಸರ್ಕಾರ ರಾಷ್ಟ್ರವ್ಯಾಪಿ ಕೈಗೊಂಡಿರುವ ಲಸಿಕಾಕರಣ ಅಭಿಯಾನಕ್ಕೆ ಇದು ಸಂಸ್ಥೆಯ ಮೊದಲ ಕೊಡುಗೆಯಾಗಿದೆ ಎಂದರು.

ಅನಾರೋಗ್ಯಕ್ಕೆ ಒಳಗಾಗಿರುವ ವೃದ್ಧರನ್ನು ದತ್ತಿ ಸಂಸ್ಥೆಗಳು ಮತ್ತು ಸಮಾನಮನಸ್ಕ ಸಂಘಸಂಸ್ಥೆಗಳ ಮೂಲಕ ಪತ್ತೆ ಹಚ್ಚಿ ಅವರಿಗೂ ಲಸಿಕೆಯನ್ನು ಕೊಡಿಸಲಾಗುತ್ತದೆ. ಈ ಲಸಿಕಾಕರಣ ಅಭಿಯಾನಕ್ಕೆಂದು ಸಂಸ್ಥೆ ವತಿಯಿಂದ ₹ 8 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಮಲಬಾರ್ ಗ್ರೂಪ್ ತನ್ನ ತಂಡದ ಸದಸ್ಯರ, ಪಾಲುದಾರ ಜಾಲಗಳ ಸದಸ್ಯರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಏನು ಬೇಕಾದರೂ ಮಾಡಲಿದೆ ಎಂದು ಹೇಳಿದರು.

ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್‌ಲೆಟ್‌ಗಳನ್ನು ಹೊಂದಿರುವ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಮಾಜಮುಖಿ ಕಾರ್ಯಗಳ ಮೂಲಕ ಇತರರಿಗೆ ಮಾದರಿಯಾಗಿದೆ. ಕೋವಿಡ್-19 ರ ಸಾಂಕ್ರಾಮಿಕದ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಸರಣಿ ಸಿಎಸ್‌ಆರ್ ಉಪಕ್ರಮಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾರ್ವಜನಿಕರಿಗೆ ನೆರವಾಗುತ್ತಿದೆ. ಇದೀಗ ಲಸಿಕಾಕರಣವನ್ನು ತ್ವರಿತಗತಿಯಲ್ಲಿ ನಡೆಸುವ ಸರ್ಕಾರದ ಕಾರ್ಯದಲ್ಲಿ ಕೈಜೋಡಿಸಿದೆ.

ಸಂಸ್ಥೆಯ ವತಿಯಿಂದ ಕೊಡಮಾಡಲಾದ ಉಚಿತ ಲಸಿಕಾ ಅಭಿಯಾನದಲ್ಲಿ‌ ಸಂಸ್ಥೆಯು ಕಂಪನಿ ಮತ್ತು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದಿತ ಲಸಿಕೆಗಳನ್ನು ನೀಡಲಿದೆ. ಈ ಮೂಲಕ ಆಭರಣ ತಯಾರಕರು, ಸಿಬ್ಬಂದಿ, ಹೂಡಿಕೆದಾರರು ಮತ್ತು ಅವರ ಕುಟುಂಬ ಸದಸ್ಯರಿಗಲ್ಲದೇ ದುರ್ಬಲ ವರ್ಗದವರಿಗೆ ಈ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ಲಸಿಕೆಯನ್ನು ಪಡೆಯುವ ಪ್ರಾಮುಖ್ಯತೆ ಬಗ್ಗೆ ತನ್ನ ಸಿಬ್ಬಂದಿಗಳಿಗೆ ಅರಿವು ಮೂಡಿಸುವುದು, ತಮ್ಮ ಅವಲಂಬಿತರ ಆರೋಗ್ಯ ಕಾಪಾಡಿಕೊಳ್ಳುವುದು, ಇದರ ಮಹತ್ವವನ್ನು ಇತರರಿಗೆ ತಿಳಿಸುವುದು ಮತ್ತು ಲಸಿಕೆ ಪಡೆಯುವವರಿಗೆ ನೆರವಾಗುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಅಲ್ಲದೇ ಸಂಸ್ಥೆಯು ಕಾರ್ಯ ನಿರ್ವಹಿಸುವ ಎಲ್ಲಾ ಪ್ರದೇಶಗಳಲ್ಲಿನ ಸಿಎಸ್‌ಆರ್‌ ಚಟುವಟಿಕೆಗಳಿಗಾಗಿ ತನ್ನ ಲಾಭದ ಶೇ.5 ರಷ್ಟನ್ನು ಮೀಸಲಿಟ್ಟಿದೆ ಎಂದರು.