ಬೆಂಗಳೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಾರಿ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಗೂ 20 ದಿನಗಳ ಮೊದಲು ವೇಳಾಪಟ್ಟಿ ಪ್ರಕಟಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಸುತ್ತೇವೆ. ಮೂರು ವಿಷಯಗಳನ್ನು ಸೇರಿಸಿ ಒಂದು ಪರೀಕ್ಷೆ ನಡೆಸುತ್ತೇವೆ. ಇದಕ್ಕೆ ಬಹು ಆಯ್ಕೆಯ ಮಾದರಿಯಲ್ಲಿ ಪಶ್ನೆ ಪತ್ರಿಕೆ ತಯಾರು ಮಾಡುತ್ತೇವೆ. ಪ್ರಶ್ನೆಗಳು ನೇರ ಹಾಗೂ ಸರಳವಾಗಿರಲಿದೆ. ಎರಡನೇ ಹಂತದಲ್ಲಿ ಐಚ್ಛಿಕ ಭಾಷೆ ಪರೀಕ್ಷೆ ನಡೆಯಲಿದೆ. ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.