ಬೆಂಗಳೂರು: ಕೋವಿಡ್ ದೃಢಪಡುವ ಪ್ರಮಾಣ ಶೇ 5ಕ್ಕಿಂತ ಕೆಳಗೆ ಬರುವರೆಗೆ ಮತ್ತು ಮರಣ ಪ್ರಮಾಣ ಶೇ. 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕೋವಿಡ್ ದೃಢ ಪ್ರಮಾಣ ಸೋಮವಾರ (ಮೇ 31) ಶೇ 13.57ರಷ್ಟು ಹಾಗೂ ಮರಣ ಪ್ರಮಾಣ ಶೇ 2.47 ಇದೆ. ದಿನೇ ದಿನೇ ಕೋವಿಡ್ ದೃಢ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ದಿನನಿತ್ಯದ ಸೋಂಕು ದೃಢ ಪ್ರಮಾಣ 5 ಸಾವಿರಕ್ಕೆ ಇಳಿಯುವರೆಗೆ ಕಠಿಣ ನಿಯಮಗಳನ್ನು ಮುಂದುವರಿಸಬೇಕು ಎಂದು ಸಮಿತಿ ಹೇಳಿದೆ.
ಯಾವ ರೀತಿಯಲ್ಲಿ ಲಾಕ್ಡೌನ್ ಮಾಡಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟಿದ್ದು. ಸದ್ಯದ ಪರಿಸ್ಥಿತಿ ನೋಡಿದರೆ, ಲಾಕ್ಡೌನ್ ವಿಧಿಸಿರುವ ಜೂನ್ 7ರವರೆಗೆ ದೃಢ ಪ್ರಮಾಣ ಶೇ 5ಕ್ಕಿಂತ ಕೆಳಗೆ ಮತ್ತು ಮರಣ ಪ್ರಮಾಣ ಶೇ 1ಕ್ಕಿಂತ ಕಡಿಮೆ ಬರುವುದು ಅನುಮಾನ. ಹೀಗಾಗಿ, ಸದ್ಯಕ್ಕೆ ಈಗ ಜಾರಿಯಲ್ಲಿರುವ ಕ್ರಮಗಳನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯವನ್ನು ಸಮಿತಿ ವ್ಯಕ್ತಪಡಿಸಿದೆ.