ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 6,020ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ಗಳಿದ್ದು, ಎಲ್ಲಾ ಗ್ರಾಮಗಳೂ ಸೇರಿ 95,000ಕ್ಕೂ ಹೆಚ್ಚು ಪಂಚಾಯತ್ ಸದಸ್ಯರಿದ್ದಾರೆ. ಪ್ರತಿ ಗ್ರಾಪಂಗಳಲ್ಲಿ ಈಗ ಕೋವಿಡ್ ಕಾರ್ಯಪಡೆಯನ್ನು ರಚನೆ ಮಾಡಲಾಗಿದ್ದು, ಪ್ರತಿನಿತ್ಯವೂ ಸಭೆ ಸೇರಿ ಜನರ ಮಧ್ಯೆ ಸಂಪರ್ಕದಲ್ಲಿರುವುದು ಅವಶ್ಯವಾಗಿರುತ್ತದೆ.
ಅಲ್ಲದೆ ಪ್ರತಿ ವಾರ್ಡಿನಲ್ಲಿರುವ ಮನೆ ಮನಗೂ ವಾರ್ಡಿನ ಸದಸ್ಯರು ಭೇಟಿ ನೀಡಬೇಕೆಂದೂ ಹಾಗೂ ಪಂಚಾಯತ್ನ ಅಧ್ಯಕ್ಷರು, ಉಪಾಧ್ಯಕ್ಷರು ಇಡೀ ಗ್ರಾಮವನ್ನು ಗಮನಿಸಬೇಕೆಂದು ಈಗಾಗಲೇ ಸರಕಾರ ನಿರ್ಧರಿಸಿದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ನ ಕಾರ್ಯಪಡೆಗಳು ಕರ್ತವ್ಯ ನಿರ್ವಹಿಸುತ್ತಿದೆ. ಅದೇ ರೀತಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮಹಾನಗರ ಪಾಲಿಕೆ, ನಗರ ಪಂಚಾಯತ್ಗಳು ಸೇರಿದಂತೆ ಇಡೀ ರಾಜ್ಯದಲ್ಲಿರುವಂತಹ ಎಲ್ಲಾ ನಗರಾಡಳಿತ ಸಂಸ್ಥೆಗಳ ಸದಸ್ಯರು ಕೂಡ ನಿತ್ಯ ಬಡವರ ಮನೆಯಲ್ಲಿ ನಿಂತುಕೊಂಡು ಕೊರೊನಾ ಪೀಡಿತರನ್ನು ಭೇಟಿ ಮಾಡಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸಿ ಕೊರೊನಾ ನಿಯಂತ್ರಣಕ್ಕೆ ತರುವಂತಹ ಕಠಿಣಕ್ರಮದಲ್ಲಿ ತಲ್ಲೀನರಾಗಿದ್ದಾರೆ.
ಇವರೆಲ್ಲರಿಗೂ ಕೂಡ ಕೊರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುವ ಕೊರೊನಾ ವಾರಿಯರ್ಗೆ ಕೊಟ್ಟಂತಹ ಪ್ರಾಶಸ್ತ್ಯವನ್ನು ಕೊಟ್ಟು ವ್ಯಾಕ್ಸಿನ್ಗಳನ್ನು ನೀಡಲು ಸೂಕ್ತ ಆದೇಶವನ್ನು ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜ್ಯದಾದ್ಯಂತ ಇರುವ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೆ ವ್ಯಾಕ್ಸಿನ್ ನೀಡಲು ಆದೇಶಿಸಿದ್ದಾರೆ.