ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆನ್ಲೈನ್ ನಲ್ಲಿ ಆಯೋಜಿಸಿರುವ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಉತ್ಸವ ತತ್ತ್ವಾಂಕುರ -2021 ನ್ನು, ಖ್ಯಾತ ಬರಹಗಾರ ಜಯಂತ್ ಕಾಯ್ಕಿಣಿ ಅವರು ಮೇ 27, ಗುರುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕ ಮತ್ತು ಬರಹಗಾರ ಟಿ ಎಂ ಕೃಷ್ಣ ಅವರೊಂದಿಗೆ ಮೇ 28, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ.
ಮಣಿಪಾಲ್ನ ಜಿಸಿಪಿಎಎಸ್ ಎರಡು ದಿನಗಳ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಆನ್ಲೈನ್ ಉತ್ಸವ ‘ತತ್ತ್ವಾಂಕುರ’ವನ್ನು ಮೇ 27 ರಿಂದ 28 ರವರೆಗೆ ಹಮ್ಮಿಕೊಳ್ಳುತ್ತಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಹೆಯ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಹಿಸಲಿದ್ದಾರೆ. ದೇಶದ ಇಪ್ಪತ್ತೈದಕ್ಕೂ ಹೆಚ್ಚು ಕಾಲೇಜುಗಳು ಮತ್ತು ಸುಮಾರು ೧೬೦ ವಿದ್ಯಾರ್ಥಿಗಳು ಈ ಬಾರಿಯ ತತ್ತ್ವಾಂಕುರದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ (ಮೋಕ್ಪ್ರೆಸ್), ಗೀತಾಂಜಲಿ (ಕವನ ವಾಚನ), ಅಂತರ್ವಾಣಿ (ಆಡಿಯೋ ಪಿಎಸ್ಎ), ಕೃತಿ-ಕ್ (ಸಿನೆಮಾ ವಿಮರ್ಶೆ), ಪರ್ಯಾವರಣ (ಪರಿಸರ ನಿರ್ವಹಣೆ) ಸೇರಿದಂತೆ ಕಲೆ, ಬರವಣಿಗೆ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಆನ್ಲೈನ್ ಸ್ಪರ್ಧೆಗಳು ನಡೆಯಲಿದೆ. ಜಿಸಿಪಿಎಎಸ್ ನ ‘ತತ್ತ್ವಾಂಕುರ’ ಕಲ್ಪನೆಗಳ, ಪ್ರತಿಭೆಯ ಮತ್ತು ಸೃಜನಶೀಲತೆಯ ಹಬ್ಬ. ಇವುಗಳೆಲ್ಲವನ್ನು ಒಳಗೂಡಿಸಿಕೊಂಡು ಅರ್ಥದ ಶೋಧನೆ ಎಂದಿದ್ದಾರೆ. ಇದು ಸಾಮಾನ್ಯ ಅರ್ಥದಲ್ಲಿನ ವಿದ್ಯಾರ್ಥಿಗಳ ಹಬ್ಬವಲ್ಲ, ಬದಲಾಗಿ ಇಂತಹ ದುಗುಡದ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿನ ಸೃಜನಶೀಲಲತೆಯನ್ನು ಹುಡುಕುವ ಅರ್ಥಪೂರ್ಣ ಕೆಲಸವಾಗಿದೆ ಎಂದು ನಿರ್ದೇಶಕರಾದ ಪ್ರೊ. ವರದೇಶ್ ಹಿರೆಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.