ಬೆಂಗಳೂರು: ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜ್ ಸಿಗದ ಬಡವರು ಮತ್ತು ಕೂಲಿ ಕಾರ್ಮಿಕರಿಗಾಗಿ ಇನ್ನು 10–12 ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಬಿಬಿಎಂಪಿ ಕೋವಿಡ್ ವಾರ್‌ರೂಂಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಅವರು ಈ ವಿಷಯ ತಿಳಿಸಿದರು.
ಸರ್ಕಾರದ ಹಣಕಾಸಿನ ಇತಿಮಿತಿಯಲ್ಲಿ ಮೊದಲ ಪ್ಯಾಕೇಜ್ ನೀಡಿದ್ದೇವೆ. ದೊಡ್ಡದಾಗಿ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಕಷ್ಟದಲ್ಲಿರುವ ಇನ್ನೂ ಸಾಕಷ್ಟು ಬಡವರಿಗೆ ಪ್ಯಾಕೇಜ್ ನೀಡುವ ಇಚ್ಛೆ ಇದೆ. ಆ ಬಗ್ಗೆ ಖಂಡಿತಾ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.












