ಅಸ್ಸಾಂ: ಚುನಾವಣೆಯಲ್ಲಿ ಬಳಸದ ಮತಯಂತ್ರ ಎಣಿಕೆ ಕೇಂದ್ರದಲ್ಲಿ ಪತ್ತೆ

ಗುವಾಹಟಿ: ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾದ ಘಟನೆ ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ.

ಚುನಾವಣೆಯಲ್ಲಿ ಬಳಸದ ಮತಯಂತ್ರ ಎಣಿಕೆ ಕೇಂದ್ರಲ್ಲಿ ಪತ್ತೆಯಾದ ವಿಷಯ ತಿಳಿದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ ಮೇಘ ನಿಧೀ ದಹಲ್ ಅವರು ಮತಗಟ್ಟೆ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಪ್ರಾಥಮಿಕ ತನಿಖೆ ವೇಳೆ, ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾಗಿರುವುದು ಚುನಾವಣೆ ದಿನ ಕಾದಿರಿಸಿದ್ದ ಮತಯಂತ್ರ ಎಂಬುದು ತಿಳಿದುಬಂದಿದೆ. ಚುನಾವಣೆಯ ದಿನ ಪ್ರಮಾದವಶಾತ್ ಅದನ್ನು ಎಣಿಕೆ ಕೇಂದ್ರಕ್ಕೆ ಸಾಗಿಸಲಾಗಿತ್ತು ಎನ್ನಲಾಗಿದೆ.

ಮತಯಂತ್ರವನ್ನು ಅಭ್ಯರ್ಥಿಗಳ ಎದುರು ತೆರೆದು ತೋರಿಸಲಾಗಿದ್ದು, ದುರ್ಬಳಕೆ ಆಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಬಳಕೆಯಾಗದ ಮತಯಂತ್ರವನ್ನು ತಕ್ಷಣವೇ ಮತಯಂತ್ರಗಳನ್ನು ಕಾಯ್ದಿರಿಸುವ ಕೊಠಡಿಗೆ ಒಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.