ಒಂದೇ ಓವರ್‌ನಲ್ಲಿ 37 ರನ್ ಬಾರಿಸಿದ ಜಡೇಜ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಒಂದೇ ಓವರ್ ನಲ್ಲಿ 37 ರನ್ ಬಾರಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್ ಸಹಿತ 37 ರನ್ ಜಡ್ದು ಚಚ್ಚಿದ್ದಾರೆ. ಇದರಲ್ಲಿ ಸತತ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಹರ್ಷಲ್ ಬೆನ್ನತ್ತಿದ ಜಡೇಜ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಈ ಪೈಕಿ ಮೂರನೇ ಎಸೆತವು ನೋ ಬಾಲ್ ಆಗಿತ್ತು. ಬಳಿಕ ನಾಲ್ಕನೇ ಎಸೆತದಲ್ಲಿ ಎರಡು ರನ್ ಮತ್ತು ಐದನೇ ಎಸೆತದಲ್ಲಿ ಮಗದೊಂದು ಸಿಕ್ಸರ್ ಬಾರಿಸಿದರು. ಅಂತಿಮ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಒಟ್ಟು 37 ರನ್ ಬಾರಿಸಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಓವರ್‌ವೊಂದರಲ್ಲಿ ಅತಿ ಹೆಚ್ಚು ಗಳಿಸಿರುವ ಕ್ರಿಸ್ ಗೇಲ್ ದಾಖಲೆಯನ್ನು ರವೀಂದ್ರ ಜಡೇಜಾ ಸರಿಗಟ್ಟಿದ್ದಾರೆ. 2011ರಲ್ಲಿ ಕ್ರಿಸ್ ಗೇಲ್, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದ ಪಂದ್ಯದಲ್ಲಿ ಓವರ್‌ವೊಂದರಲ್ಲಿ 36ರನ್ ಗಳಿಸಿದ್ದರು.

25 ಎಸೆತಗಳಲ್ಲಿ ಅರ್ಧಶತಕ ಗಡಿಯನ್ನು ದಾಟಿದ ಜಡೇಜ ಅಂತಿಮವಾಗಿ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 68 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ಹರ್ಷಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಮೂರು ವಿಕೆಟ್ ಪಡೆದರೂ 51 ರನ್ ಬಿಟ್ಟು ಕೊಟ್ಟು ದುಬಾರಿ ಬೌಲರ್ ಆದರು.