ಉಡುಪಿ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ; ಮೇ 14ಕ್ಕೆ ಪಟ್ಟಾಭಿಷೇಕ

ಉಡುಪಿ: ಉಡುಪಿ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ 31ನೇ ಉತ್ತರಾಧಿಕಾರಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಡಾ. ಎಂ.ಉದಯ್ ಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರ ಅನಿರುದ್ಧ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ.

ಮೇ 14ರಂದು ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ಅನಿರುದ್ಧ ಅವರ ಪಟ್ಟಾಭಿಷೇಕ ನಡೆಯಲಿದೆ.
ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಿರೂರು ಮಠದ ದ್ವಂದ್ವ ಮಠ ಸೋದೆ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದು, ಎಸ್ಸೆಸ್ಸೆಲ್ಸಿವರೆಗೆ ಲೌಕಿಕ ಶಿಕ್ಷಣ ಪಡೆದಿರುವ ವಟುವಿಗೆ ಈಗ ಸುಮಾರು 16 ವರ್ಷ ವಯಸ್ಸು. ಕಳೆದ 2 ವರ್ಷಗಳಿಂದ ಮಧ್ವ ಸಿದ್ಧಾಂತ ಹಾಗೂ ವೇದ, ವೇದಾಂತ ವಿಷಯಗಳನ್ನು ಬೋಧಿಸಲಾಗುತ್ತಿದೆ.
ನಾಗಪುರ, ಕಾಶಿ, ಉಡುಪಿ ಸಹಿತ ವಿವಿಧೆಡೆ ಜ್ಯೋತಿಷಿಗಳಲ್ಲಿ ವಟುವಿನ ಸಂನ್ಯಾಸ ಯೋಗದ ಬಗ್ಗೆ ಜಾತಕವನ್ನು ಪರಾಮರ್ಶಿಸಲಾಗಿದೆ. ಎಲ್ಲೆಡೆ ಸಕಾರಾತ್ಮಕ ಉತ್ತರ ದೊರಕಿದೆ.

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ಅನಾರೋಗ್ಯದಿಂದ ನಿಧನರಾದ ಬಳಿಕ 3 ವರ್ಷಗಳಿಂದ ದ್ವಂದ್ವ ಮಠವಾದ ಸೋದೆ ಮಠ ಶಿರೂರು ಮಠದ ಆಡಳಿತ ನಿರ್ವಹಿಸುತ್ತಿದೆ.