ಶತಮಾನೋತ್ಸವ ಸಂಭ್ರಮ: ಸಾಸ್ತಾನ ಚರ್ಚಿನಲ್ಲಿ ಧರ್ಮಗುರುಗಳು, ಧರ್ಮಭಗಿನಿಯರಿಗೆ ಹುಟ್ಟೂರ ಗೌರವ

ಕೋಟ: ಧರ್ಮಗುರು ಅಥವಾ ಧರ್ಮಭಗಿನಿಯಾಗಿ ಸೇವೆ ಮಾಡಲು ಬರುವ ಕರೆ ದೇವರ ವರವಾಗಿದ್ದು, ಅದನ್ನು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಮೈನರ್ ಸೆಮಿನರಿಯ ನಿರ್ದೇಶಕ ಬ್ಯಾಪ್ಟಿಸ್ಟ್ ಮಿನೇಜಸ್ ಹೇಳಿದರು.

ಅವರು ಸೋಮವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಧರ್ಮಗುರು ಅಥವ ಧರ್ಮಭಗಿನಿಯದ ಸೇವೆಯನ್ನು ನೆನೆದು ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ಸಂದೇಶ ನೀಡಿದರು.

ಯೇಸು ಸ್ವಾಮಿ ಜಗತ್ತಿಗೆ ನೀಡಿದ ಶಾಂತಿ ಸಂದೇಶವನ್ನು ಪ್ರಸಾರ ಮಾಡುವ ಸೇವೆಯಲ್ಲಿ ಜಗತ್ತಿನಾದ್ಯಂತ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ತಮ್ಮ ಸೇವೆಯನ್ನು ನೀಡುತ್ತಿದ್ದು ಈ ಅವಕಾಶವನ್ನು ಹೊಸ ಪೀಳಿಗೆ ಬಳಸಿಕೊಳ್ಳುವಂತಾಗಬೇಕು ಎಂದರು.

ಬಲಿಪೂಜೆಯ ಬಳಿಕ ಸಾಸ್ತಾನ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದು ಪ್ರಸ್ತುತ ಧರ್ಮಗುರುಗಳಾಗಿ, ಧರ್ಮಭಗಿನಿಯರಾಗಿ ಜಗತ್ತಿನ ಬೇರೆ ಬೇರೆ ಸ್ಥಳಗಳ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ಹಾಗೂ ದೇವಾಲಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಭಗಿನಿಯರನ್ನು ಗೌರವಿಸಲಾಯಿತು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ಜಾನ್ ವಾಲ್ಟರ್ ಮೆಂಡೊನ್ಸಾ, ಅತಿಥಿ ಧರ್ಮಗುರುಗಳಾದ ಜೋನ್ ಲೂವಿಸ್, ಸ್ಟೀವನ್ ಡಿಸೋಜಾ, ಪಾಲನಾ ಸಮಿತಿಯ ಕಾರ್ಯದರ್ಶಿ ಲೂಯಿಸ್ ಡಿಸೋಜಾ, 18 ಆಯೋಗಗಳ ಸಂಯೋಜಕಿ ಜಾನೆಟ್ ಬಾಂಜ್ ಹಾಗೂ ಇತರರು ಉಪಸ್ಥಿತರಿದ್ದರು.

ಸರಕಾರದ ಕೊರೋನಾ ಮಾರ್ಗಸೂಚಿ ಹಿನ್ನಲೆಯಲ್ಲಿ ಶತಮಾನೋತ್ಸವ ಸಂಭ್ರಮವನ್ನು ಕೇವಲ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಿದ್ದು ಏಪ್ರಿಲ್ 14ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ಜರುಗಲಿದೆ.