ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಖ್ಯಾತ ನಿರ್ದೇಶಕ, ನಿರ್ಮಾಪಕ ದಿವಂಗತ ಶಂಕರ್ ಸಿಂಗ್ ಅವರ ಪತ್ನಿ ಪ್ರತಿಮಾ ದೇವಿ (88) ಅವರು ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದರು.
ಮೂಲತಃ ಉಡುಪಿಯ ಪ್ರತಿಮಾ ದೇವಿ ಸಣ್ಣಪ್ರಾಯದಲ್ಲೇ ರಂಗಭೂಮಿಗೆ ಹೆಜ್ಜೆ ಇಟ್ಟಿದ್ದರು. ಇವರ ಮೂಲ ಹೆಸರು ಮೋಹಿನಿ.1947ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಕೃಷ್ಣಲೀಲಾ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗನ್ಮೋಹಿನಿ ಚಿತ್ರದ ಮುಖಾಂತರ ನಾಯಕಿಯಾಗಿ ಅವರು ಮಿಂಚಿದ್ದರು
ಚಂಚಲ ಕುಮಾರಿ, ನಾಗಕನ್ಯಾ, ದಲ್ಲಾಳಿ, ಧರ್ಮಸ್ಥಳ ಮಹಾತ್ಮೆ, ವರದಕ್ಷಿಣೆ, ಮುಟ್ಟಿದ್ದೆಲ್ಲಾ ಚಿನ್ನ, ರಾಜ್ಕುಮಾರ್ ಅವರ ಜತೆಗೆ ಭಕ್ತಚೇತ ಹೀಗೆ ಒಟ್ಟು 60 ಚಿತ್ರಗಳಲ್ಲಿ ಅವರು ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ್ದರು.
ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಇವರ ಮಕ್ಕಳು.