ಗೋಕರ್ಣ: ಭಾರತದ ಕೋವಿಡ್ ಲಸಿಕೆಗೆ ವಿದೇಶಿಗರಿಂದಲೂ ಬೇಡಿಕೆ ಹೆಚ್ಚಿದೆ. ಗೋಕರ್ಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆಯಲು ವಿದೇಶಿ ಪ್ರಜೆಗಳು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ವಿದೇಶಿಗರು, ಬೇಕಿದ್ದರೆ ಹಣ ಪಾವತಿಸುತ್ತೇವೆ. ದಯವಿಟ್ಟು ಲಸಿಕೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಲ್ಲಿ 15ಕ್ಕೂ ಹೆಚ್ಚು ವಿದೇಶಿಗರು ಲಸಿಕೆ ಕೇಳಿಕೊಂಡು ಬಂದಿದ್ದು, ವಿದೇಶಿಗರಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಆದೇಶ ಬಂದಿಲ್ಲದ ಕಾರಣ. ವೈದ್ಯರು ಅವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಧಾರ್ ಕಾರ್ಡ್, ‘ಪಾನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೇ ಲಸಿಕೆ ಕೊಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ನೋಡಿಕೊಂಡು ಹೇಳುತ್ತೇವೆ ಎಂದು ವೈದ್ಯರು ವಿದೇಶಿ ಪ್ರವಾಸಿಗರಿಗೆ ಮನವರಿಕೆ ಮಾಡುತ್ತಿದ್ದಾರೆ.