ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

ಉಡುಪಿ: ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೇ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.

ಧರ್ಮ ಪಾಂತ್ಯದ ಪ್ರಧಾನ ಧಾರ್ಮಿಕ ಕಾರ‍್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್‌ ಐಸಾಕ್‌ ಲೋಬೊ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರುಗಳಾದ ವಂ ಕೆನ್ಯೂಟ್ ಆರಾನ್ಹಾ, ಪಿಲಾರ್ ಸಭೆಯ ವಂ ಜೊಸ್ಸಿ ಮಸ್ಕರೇನ್ಹಸ್, ವಂ ಬ್ರಾಯನ್ ಸಿಕ್ವೇರಾ ಉಪಸ್ಥಿತರಿದ್ದರು.

ಧರ್ಮಾಧ್ಯಕ್ಷ ರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು.
ಪೋಪ್‌ ಫ್ರಾನ್ಸಿಸ್‌ ಅವರು ಪಾದ ತೊಳೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರ ಪಾದ ತೊಳೆಯಲು ಅವಕಾಶ ಕಲ್ಪಿಸಿ ಆದೇಶ ನೀಡಿದ್ದು,   ಸಂಪ್ರದಾಯವನ್ನು ಮುಂದುವರಿಸಿ ಪುರುಷರ ಜತೆಗೆ ಮಹಿಳೆಯರು ಸೇರಿದಂತೆ 12 ಮಂದಿ ಪ್ರೇಷಿತರ ಪಾದಗಳನ್ನು ಧರ್ಮಾಧ್ಯಕ್ಷ ರು ಸೇರಿದಂತೆ ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಕೂಡ ತೊಳೆಯಲಾಯಿತು.

ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಆರು  ಮಹಿಳಾ ಪ್ರತಿನಿಧಿಗಳು ಹಾಗೂ ಆರು ಮಂದಿ ಪುರುಷ ವಿಶ್ವಾಸಿಗಳ ಪಾದಗಳನ್ನು ತೊಳೆಯಲಾಯಿತು.ಪವಿತ್ರ ಗುರುವಾರದಂದು ಯೇಸು ಸ್ವಾಮಿಯು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಸೇರಿ ತನ್ನ ಕೊನೆಯ ಭೋಜನ ನಡೆಸಿದ್ದರು. ಈ ವೇಳೆ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ತನ್ನ ಶಿಷ್ಯರಿಗೆ ದೀನತೆಯ ಹಾಗೂ ಸೇವೆಯ ಸಂದೇಶ ಸಾರಿದ್ದರು.

ಕೋವಿಡ್ ಎರಡನೇ ಅಲೆಯ ಹಿನ್ನಲೆಯಲ್ಲಿ ಧಾರ್ಮಿಕ ವಿಧಿಯಲ್ಲಿ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ, ಭಾಗವಹಿಸುವ ಪ್ರತಿಯೊಬ್ಬ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲಾಗಿತ್ತು.
ಪವಿತ್ರ ಗುರುವಾರದ ಅಂಗವಾಗಿ ಚರ್ಚ್‌ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರುಗಿದವು.

ಪವಿತ್ರ ಗುರುವಾರದ ಬಳಿಕ ಶುಕ್ರವಾರದಂದು ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನು ಕ್ರೈಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸಲಿದ್ದಾರೆ.