ಉಡುಪಿ: ವಾಲಿಬಾಲ್ ಆಟವಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ರಾಜ್ಯಮಟ್ಟದ ವಾಲಿಬಾಲ್ ಆಟಗಾರನೋರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ ಉಡುಪಿಯ ಇನ್ನಂಜೆಯಲ್ಲಿ ನಡೆದಿದೆ.
ಮೃತನನ್ನು ಕುರ್ಕಾಲು ಸುಭಾಸ್ ನಗರ ನಿವಾಸಿ, ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಪಕ್ಕಿ ದೇವು ಯಾನೆ ದೇವರಾಜ್ (33) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಇನ್ನಂಜೆಯಲ್ಲಿ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ದೇವರಾಜ್ ಆಟವಾಡುತ್ತಿದ್ದರು. ರಾತ್ರಿ ಒಂದು ಗಂಟೆಯ ವೇಳೆಗೆ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ದೇವರಾಜ್ ಅಂಗಣದಲ್ಲೇ ಕುಸಿದುಬಿದ್ದರು.
ಕೂಡಲೇ ಅವರನ್ನು ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟೊತ್ತಿಗೆ ದೇವರಾಜ್ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಅವಿವಾಹಿತರಾಗಿರುವ ದೇವರಾಜ್ ನಾಲ್ಕು ತಿಂಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಮತ್ತು ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ.