ಉಡುಪಿ: ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ಮಾಸ್ಕ್ ವಿತರಿಸಿದ ಟ್ರಾಫಿಕ್ ಪೊಲೀಸರು

ಉಡುಪಿ: ಜಿಲ್ಲೆಯಲ್ಲಿ‌ ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೋವಿಡ್ ನಿಯಮ‌ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದರ ಜತೆಗೆ ಉಡುಪಿ ನಗರದಲ್ಲಿ‌ ಇಂದು ಸಂಚಾರ ಪೊಲೀಸರು ಉಚಿತ ಮಾಸ್ಕ್ ವಿತರಿಸುವ ಮೂಲಕ ಕೋವಿಡ್ ಜಾಗೃತಿ ಮೂಡಿಸಿದರು.

ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಉಡುಪಿ ಸಂಚಾರ ಠಾಣಾ ಪೋಲಿಸರು ಉಡುಪಿಯ ಕಲ್ಸಂಕ, ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾಸ್ಕ್ ಧರಿಸದವರ ವಿರುದ್ಧ ದಂಡ ಹಾಕುವುದರ ಜತೆಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.

ಮಾಸ್ಕ್ ಇದ್ದರೂ ಸಹ ಮಾಸ್ಕ್ ಹಾಕದೆ ವಾಹನ ಚಲಾಯಿಸುತ್ತಿದ್ದ ದೃಶ್ಯ ಅಲ್ಲಾಲ್ಲಿ ಕಂಡುಬಂತು. ಖಾಸಗಿ ಬಸ್ ಗಳಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿ ನೀಡಿದ ನಿರ್ವಾಹಕರಿಗೆ ಪೊಲೀಸರು ದಂಡ ವಿಧಿಸಿ ಬಿಸಿಮುಟ್ಟಿಸಿದರು.