«ಗಣಪತಿ ಹಾಸ್ಪುರ
ನೀವು ಮಾರುಕಟ್ಟೆಯಲ್ಲಿ ಸಿಗುವ ಮ್ಯಾಂಗೋ, ಆರೆಂಜ್ ಇತ್ಯಾದಿಗಳಿಂದ ಸಿದ್ಧಗೊಂಡ ರುಚಿರುಚಿಯಾದ ಪೆಪ್ಸಿಗಳನ್ನು ಸವಿದಿರಬಹುದು. ಆದ್ರೆ, ಫ್ಯಾಷನ್ ಫ್ರುಟ್ನಿಂದ ತಯಾರಿಸಿದ ಪೆಪ್ಸಿಯ ರುಚಿಯನ್ನು ಸವಿದಿದ್ದೀರಾ? ಅಂತಹ ಹಣ್ಣಿನ ರಸದಿಂದ ಪೆಪ್ಸಿ ಮಾಡಬಹುದು ಎಂಬುದು ಸಹಾ ಗೊತ್ತಿರಲಿಕ್ಕಿಲ್ಲ ಅಲ್ಲವೇ? ಅಂಥದೊಂದು ಸಾಧನೆ ಮಾಡಿ ತೋರಿಸಿದ್ದಾರೆ ಕಾನಕೊಡ್ಲಿನ ಕೃಷಿಕ ಪ್ರಸಾದ ಹೆಗಡೆ.
ಇವರು ಉ.ಕ.ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಮ್ಮಾಡಿ (ಕುಂದರಗಿ ಗ್ರಾಂ. ಪಂ.) ಸಮೀಪದ ಕಾನಕೊಡ್ಲಿನವರು. ಬಿ. ಎ. ಪದವೀಧರರಾದ ಇವರು ಕೃಷಿಯನ್ನೆ ಉಸಿರಾಗಿಸಿಕೊಂಡವರು. ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಈ ಉತ್ಸಾಹಿ ಕೃಷಿಕರು 2013-14 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಥಹ ಸಾಧನೆಗೈದಿರುವ ಪ್ರಸಾದ ಹೆಗಡೆ ಎಲ್ಲೋ ಬಿದ್ದು ವೇಸ್ಟ್ ಆಗಿ ಹೋಗುವ ಹಣ್ಣನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮಾತಿಗೆ ಅವರು ಫ್ಯಾಷನ್ ಫ್ರುಟ್ನಿಂದ ಸಿದ್ಧಪಡಿಸಿದ “ಪೆಪ್ಸಿ”ಯೇ ತಾಜಾ ನಿದರ್ಷನ.
ಕಲ್ಪನೆ ಬಂದಿದ್ದು ಹೇಗೆ?
ಪ್ರಸಾದ ಹೆಗಡೆ ಅವರು ಅನೇಕ ಬಗೆಯ ಹಣ್ಣು-ಹಂಪಲಿನ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಈ ‘ಫ್ಯಾಷನ್ ಫ್ರುಟ್’ ಸಹಾ ಒಂದು. ಸಾಮಾನ್ಯವಾಗಿ ಮಲೆನಾಡಿನ ಪ್ರದೇಶದಲ್ಲಿ ಈ ಹಣ್ಣನ್ನು ಪಾನಕ ಮಾಡಲು ಉಪಯೋಗಿಸುವುದೇ ಹೆಚ್ಚು. ಈ ಕಾರಣಕ್ಕಾಗಿ ಕೆಲವು ಹಳ್ಳಿಗಳಲ್ಲಿ ಇದಕ್ಕೆ “ಪಾನಕದ ಲಿಂಬು” ಎಂದು ಕರೆಯುವ ರೂಢಿ ಸಹಾ ಚಾಲ್ತಿಯಲ್ಲಿದೆ. ಇದು ಬಳ್ಳಿ ರೂಪದ ಸಸ್ಯವಾಗಿದ್ದು, ವರುಷದಲ್ಲಿ ಎರಡು ಸಮಯದಲ್ಲಿ ಕಾಯಿ ಬಿಡುತ್ತದೆ. ಬೇಸಿಗೆಯಲ್ಲಿ ಕಾಯಿ ಬಿಟ್ಟಿದ್ದನ್ನು ಆಗಾಗ ಪಾನಕವನ್ನು ಮಾಡಿ ಸವಿಯಬಹುದು. ಮದುವೆಯೋ? ಮುಂಜಿಯ ಮನೆಗೋ, ಕಳುಹಿಸಿ ಆತ್ಮೀಯತೆ, ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡು ಆ ಹಣ್ಣನ್ನು ಸದ್ಭಳಕೆ ಮಾಡಬಹುದು. ಆದರೆ ಮಳೆಗಾಲದ ಸಮಯದಲ್ಲಿ ವಿಪರೀತ ಹಣ್ಣುಗಳಾದರೆ ವೇಸ್ಟ್ ಆಗುವುದೇ ಹೆಚ್ಚು.
ಹಾಗೇ ವೇಸ್ಟ್ ಆಗಬಾರದು. ಅದು ಯಾವುದಾದರೂ ರೂಪದಲ್ಲಿ ಉಪಯೋಗ ಮಾಡಬೇಕೆಂದು ಪ್ರಸಾದ ಹೆಗಡೆ ಬಹಳ ಕಾಲ ಯೋಚಿಸಿದರು. ಹಾಗೇ ಚಿಂತಿಸಿ ಕಾರ್ಯ ರೂಪಕ್ಕೆ ಇಳಿಸಿದ್ದೇ ಈ ಪೆಪ್ಸಿ!
ಮಾಡುವುದು ಹೇಗೆ?
ಹಳದಿಯಾದ ಹಣ್ಣಿನ ಗುಳವನ್ನು ಬೇರ್ಪಡಿಸಿಕೊಂಡು, ನೀರನ್ನು ಸೇರಿಸಬೇಕು. ಸಿಹಿಯಾಗುವಷ್ಟು ಸಕ್ಕರೆ (ಪರಿಮಳಕ್ಕೆ ಬೇಕಾದ್ರೆ ಏಲಕ್ಕಿ) ಹಾಕಿಕೊಂಡು ಮಿಶ್ರಣ ಮಾಡಬೇಕು. ಆಮೇಲೆ ಅದನ್ನು ಪೆಪ್ಸಿ ಕೊಟ್ಟೆಯಲ್ಲಿ ಹಾಕಿ, ಯಂತ್ರದ ಸಹಾಯದಿಂದ ಸೀಲ್ ಮಾಡಿ ಫ್ರಿಜ್ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ಹಾಗೇ ಸಿದ್ಧವಾದ ಪೆಪ್ಸಿಯನ್ನು ಮಕ್ಕಳಿಂದ ಹಿಡಿದು ವೃದ್ಧರಾದವರು ಸಹಾ ಸವಿಯಬಹುದು. ಒಂದು ಹಣ್ಣಿನಿಂದ ಸುಮಾರು ಎಂಟು ಪೆಪ್ಸಿಗಳನ್ನು ಮಾಡಬಹುದು ಎನ್ನುತ್ತಾರೆ ಪ್ರಸಾದ ಹೆಗಡೆ.
ಈ ಎಲ್ಲಾ ಕೆಲಸಗಳನ್ನು ಬಿಡುವಿನ ಸಮಯದಲ್ಲಿ ಮಾಡಬಹುದು. ಈ ಹಣ್ಣಿನ ಪೆಪ್ಸಿ ಮಾಡಲು ಹೆಚ್ಚಿನ ಬಂಡವಾಳವೂ ಬೇಕಿಲ್ಲ. ಎಲ್ಲಿಯೋ ಬಿದ್ದು, ವೇಸ್ಟಾಗಿ ಹೋಗುವ ಹಣ್ಣನ್ನು ವ್ಯವಸ್ಥಿತವಾಗಿ ಬಳಕೆ ಮಾಡಿದಂತೆಯೂ ಆಗುತ್ತದೆ. ರುಚಿಕಟ್ಟಾಗಿ ತಯಾರಿಸಿ ಮಾರ್ಕೆಟ್ ಮಾಡಿದರೇ…. ಪ್ಯಾಕೆಟ್ ಮನಿ ಗಳಿಸಲು ಸಾಧ್ಯವಿದೆ ಎಂದು ಪ್ರಸಾದ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಚಿತ್ರ-ಬರಹ: ಗಣಪತಿ ಹಾಸ್ಪುರ