ಉಡುಪಿ: ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿದರೆ ಅಂತಹ ಕೆಲಸ ವೈಯಕ್ತಿಕ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಸ್ವಯಂ ಪ್ರೇರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.
ಅವರು ಶನಿವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಡುಪಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನಡೆದ ರಾಜ್ಯ ಮಟ್ಟದ ಯೂತ್ ರೆಡ್ಕ್ರಾಸ್ ಸಂಸ್ಥೆ ಬೇಸಿಕ್ ಓರಿಯೆಂಟೇಶನ್ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸೇವೆಯ ಮೂಲಕ ವಿಶ್ವವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ ಸಂಸ್ಥೆ ರೆಡ್ಕ್ರಾಸ್. ಹಿಂದಿನಿಂದಲೂ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ಮಾಡುತ್ತಾ ಬಂದಿದ್ದು, ಕರ್ನಾಟಕದ 15 ಬೇರೆ ಬೇರೆ ವಿಶ್ವವಿದ್ಯಾಲಯದಿಂದ ಹಲವಾರು ವಿದ್ಯಾರ್ಥಿಗಳು ಈ ಶಿಬಿರಕ್ಕೆ ಬಂದಿದ್ದು, ಇದೊಂದು ಒಳ್ಳೆಯ ಅವಕಾಶ, ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಏನು ಸೇವೆ ಮಾಡಬಲ್ಲೆವು ಎಂಬ ಯೋಚನೆಯನ್ನು ಮಾಡುವ ಸಮಯವಿದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಡುಪಿಯ ಸಭಾಪತಿ ಡಾ.ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ಎನ್. ವಿಜಯ ಬಲ್ಲಾಳ್ ಮಾತನಾಡಿದರು. ಯೂತ್ ರೆಡ್ಕ್ರಾಸ್ ವಿಂಗ್ ಮಂಗಳೂರು ವಿಶ್ವವಿದ್ಯಾಲಯದ ನೋಡಲ್ ಅಧಿಕಾರಿ ಪ್ರೋ. ವಿನಿತಾ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಕೇಂದ್ರದ ಪ್ರಾಶುಂಪಾಲ ಅಶೋಕ್.ಟಿ ಉಪಸ್ಥಿತರಿದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪ ಸಭಾಪತಿ ಡಾ.ಅಶೋಕ್ಕುಮಾರ್ ವೈ.ಜಿ ಸ್ವಾಗತಿಸಿದರು, ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಜಿಲ್ಲಾ ಘಟಕದ ಗೌರವ ಖಂಜಾಜಿ ಟಿ.ಚಂದ್ರಶೇಖರ್ ವಂದಿಸಿದರು, ಯೂತ್ ರೆಡ್ಕ್ರಾಸ್ ಉಡುಪಿ ಜಿಲ್ಲಾ ಶಾಖೆಯ ಜಿಲ್ಲಾ ಸಂಯೋಜಕ ಕೆ. ಜಯರಾಮ್ ಆಚಾರ್ಯ ಸಾಲಿಗ್ರಾಮ ನಿರೂಪಿಸಿದರು