ಡಾ. ಮೋಹನ್ ಆಳ್ವರಿಗೆ ‘ವಿಶ್ವ ಪ್ರಭಾ’ ಪುರಸ್ಕಾರ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಸ್ಥೆಯ ಸ್ಥಾಪಕ ಹಾಗೂ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ್ ಶೆಣೈ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಕೊಡಲ್ಪಡುವ ‘ವಿಶ್ವ ಪ್ರಭಾ’ ಪುರಸ್ಕಾರಕ್ಕೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮುಖ್ಯಸ್ಥ ಡಾ. ಮೋಹನ್ ಆಳ್ವ ಅವರು ಆಯ್ಕೆಯಾಗಿದ್ದಾರೆ. ಅವರು ಕನ್ನಡ ನಾಡು-ನುಡಿ ಸಂಸ್ಕೃತಿಗೆ ಕೊಟ್ಟಂತಹ ಅಮೂಲ್ಯ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿಶ್ವ ಪ್ರಭಾ ಪುರಸ್ಕಾರದ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಶಸ್ತಿಯು ₹ 1 ಲಕ್ಷ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ. ಏಪ್ರಿಲ್ 3 ಮತ್ತು 4ರಂದು ಉಡುಪಿಯಲ್ಲಿ ನಡೆಯುವ ಪ್ರತಿಷ್ಠಾನದ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಪುರಸ್ಕಾರದ ಪ್ರಾಯೋಜಕರಾದ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಸಂಚಾಲಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.