ನನ್ನ ಆರ್ಥಿಕ ಪತನಕ್ಕೆ ನಾನು ಕಾರಣವಲ್ಲ; ನಾನೊಬ್ಬ ಬಲಿಪಶು ಅಷ್ಟೇ: ಉದ್ಯಮಿ ಬಿ.ಆರ್. ಶೆಟ್ಟಿ

ಉಡುಪಿ: ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ನಿಜ. ಆದರೆ ಅದಕ್ಕೆ ನಾನು ಕಾರಣ ಅಲ್ಲ, ನಾನೊಬ್ಬ ಬಲಿಪಶು ಅಷ್ಟೇ. ಹಾಗಂತ ನಾನು ಎಲ್ಲಿಗೂ ಓಡಿ ಹೋಗಿಲ್ಲ. ಹೋಗುವುದು ಕೂಡ ಇಲ್ಲ ಎಂದು ಉದ್ಯಮಿ ಬಿ.ಆರ್. ಶೆಟ್ಟಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಸಾವಿರನೇ ಮಗುವಿನ ಜನನ ಸಂದರ್ಭದ ಪ್ರಯುಕ್ತ ಆಸ್ಪತ್ರೆಯಲ್ಲಿ ಇಂದು ಅಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಾಧ್ಯಮದವರು ವಿಜಯ್ ಮಲ್ಯ ಮೋಸ ಮಾಡಿ ಓಡಿ ಹೋದ, ನೀರವ್ ಮೋದಿ ಬ್ಯಾಂಕುಗಳಿಗೆ ಮೋಸ ಮಾಡಿ ಓಡಿ ಹೋದ ಎಂದು ಬರೆಯುತ್ತಿದ್ದಾರೆ. ನಾಳೆ ಬಿ.ಆರ್ ಶೆಟ್ಟಿ ಓಡಿಹೋದರು ಎಂದು ಬರೆಯುತ್ತಾರೆ. ಆದರೆ ಅಂಥಾ ವ್ಯಕ್ತಿ ಅಲ್ಲ, ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ ಎಂದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಆದರೆ ಇವತ್ತಿನ ನನ್ನ ಪರಿಸ್ಥಿತಿಯಲ್ಲಿ ಅವರನ್ನು ಭೇಟಿಯಾಗಿ ಚರ್ಚೆ ಮಾಡಲು ನನಗೆ ನಾಚಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಆರ್.ಎಸ್ ಲೈಫ್ ಆಸ್ಪತ್ರೆ ನನ್ನ ಕನಸಿನ ಕೂಸು:
ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಸ್ಮಾರಕ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ಗ್ರೂಪ್ ನಡೆಸುತ್ತಿದೆ. ಉಡುಪಿಯ ನನ್ನ ಕನಸಿನ ಕೂಸು ಬಿ.ಆರ್.ಎಸ್ ಲೈಫ್ ಆಸ್ಪತ್ರೆಯನ್ನು ನಾನು ನಿರ್ಮಾಣ ಮಾಡುತ್ತೇನೆ. ಅದೇ ರೀತಿ ಹಾಜಿ ಅಬ್ದುಲ್ಲಾ ಶಂಭು ಶೆಟ್ಟಿ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇನೆ. ಉಡುಪಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶ ಇದೆ ಎಂದು ಹೇಳಿದರು.