ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕಾರ್ಮಿಕ ಮೃತ್ಯು

ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿಯೊಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕಾರ್ಮಿಕನೋರ್ವನಿಗೆ ಡಿಕ್ಕಿ ಹೊಡೆದು ಹತ್ತು ಮೀಟರ್ ಆಳದ ಗದ್ದೆಗೆ ಉರುಳಿಬಿದ್ದ ಘಟನೆ ಬ್ರಹ್ಮಾವರ ಕರ್ಜೆ ಸಮೀಪದ ದಾರಣ ಕಂಬಳ ಕ್ರಾಸ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕರ್ಜೆ ಸಮೀಪದ ದಾರಣ ಕಂಬಳ ಕ್ರಾಸ್ ನಿವಾಸಿ ಕೃಷ್ಣ ಪುತ್ರನ್ (51) ಎಂಬವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಬಜ್ಪೆಯ ಅಶ್ರಫ್ ಎಂಬಾತ ಸಣ್ಣಪುಟ್ಟ ಗಾಯದೊಂದಿಗೆ ಬಚಾವಾಗಿದ್ದಾನೆ.

ಲಾರಿ ಗದ್ದೆಗೆ ಉರುಳಿ ಬಿದ್ದ ಪರಿಣಾಮ ತಲೆಕೆಳಗಾಗಿ ನಿಂತಿದ್ದು, ಲಾರಿ ಮುಂಭಾಗ ಜಖಂಗೊಂಡಿದೆ.

ಬಸ್ಸಿನಡಿ ಬೀಳಲು ಹೋದ ಪತ್ನಿ:
ಪತಿ ಮೃತಪಟ್ಟ ವಿಷಯ ತಿಳಿದು ಸ್ಥಳಕ್ಕೆ ಬಂದ ಕೃಷ್ಣ ಅವರ ಪತ್ನಿಯ ಆಕ್ರಂದಣ ಮುಗಿಲುಮುಟ್ಟಿತ್ತು. ತಾನು ಸಾಯುತ್ತೇನೆಂದು ಬಸ್ಸಿನಡಿ ಬೀಳಲು ಹೋಗಿದ್ದರು. ಆದರೆ, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಚಾವಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೂವರು ಮಹಿಳೆಯರು ಪಾರು:
ಲಾರಿ ಗದ್ದೆಗೆ ಉರುಳುವ ವೇಳೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮೂವರು ಮಹಿಳೆಯರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇವರು ಒಂದು ಕ್ಷಣ ಮೈಮರೆತ್ತಿದ್ದರೂ, ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.