ಉಡುಪಿ: ಕುಂದಾಪುರ ತಾಲೂಕು ಬಿಲ್ಲಾಡಿ ಗ್ರಾಮದ ಸಮೃದ್ಧ ವನಸಿರಿಯ ನಡುವೆ ದಶಕಗಳ ಕಾಲದಿಂದ ಭೂಗತವಾಗಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಪ್ರಸಿದ್ಧ ಜ್ಯೋತಿಷಿ ಮಾಧವನ್ ಪೊದುವಾಳ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನ ಚಿಂತನೆಯ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ಭೇಟಿ ನೀಡಿದರು.
ಗುರುಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ರಾಮಮಂತ್ರಕ್ಕಿಂತ ಅನ್ಯ ತಾರಕ ಮಂತ್ರ ಇಲ್ಲ ಎಂದು ಸ್ವಯಂ ರುದ್ರದೇವರು ತನ್ನ ಸತಿ ಪಾರ್ವತಿಗೆ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಬಿಲ್ಲಾಡಿಯಲ್ಲಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯನ್ನು ಪುನರುತ್ಥಾನಗೊಳಿಸಲು ಗ್ರಾಮಸ್ಥರು ಸಂಕಲ್ಪವನ್ನು ಮಾಡಿರುವುದು ಅತ್ಯಂತ ಸಂದರ್ಭೋಚಿತವಾಗಿದೆ. ಇಡೀ ಊರಿನ ಮಂದಿ ಒಂದೇ ಮನಸ್ಸಿನಿಂದ ದೃಢ ನಿಶ್ಚಯ ಮಾಡಿ ಈ ದೇಗುಲದ ಪುನರ್ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಸ್ಥಳೀಯ ಮುಖಂಡರಾದ ಪೃಥ್ವಿರಾಜ್ ಶೆಟ್ಟಿ , ಭುಜಂಗ ಶೆಟ್ಟಿ , ಉಮೇಶ ಹೆಗ್ಡೆ , ಕೃಷ್ಣ ಭಟ್ , ವಾಸುದೇವ ಭಟ್ ಪೆರಂಪಳ್ಳಿ , ಕರುಣಾಕರ ಶೆಟ್ಟಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು . ಜ್ಯೋತಿಷಿ ಮಾಧವನ್ ಪೊದುವಾಳ್ ರನ್ನು ಶ್ರೀಗಳು ಶಾಲು ಹೊದೆಸಿ ಗೌರವಿಸಿದರು .