ಉಡುಪಿ: ನನ್ನನ್ನು ರಾಮನ ವಿರೋಧಿ ಎನ್ನುತ್ತಾರೆ. ಆದರೆ ನನ್ನ ಹೆಸರಿನಲ್ಲಿಯೇ ರಾಮ ಇದ್ದಾನೆ. ಮಹಾತ್ಮ ಗಾಂಧಿಯಂತೆ ನಾನು ರಾಮ ಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧೀಜಿಯ ಆದರ್ಶ. ಗಾಂಧೀಜಿಯನ್ನು ಕೊಂದ ಸಂಘ ಪರಿವಾರದವರು ರಾಮಭಕ್ತರಾಗಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾಕಾರರಿಗೆ ತಿರುಗೇಟು ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ ಜನಧ್ವನಿ ಪಾದಯಾತ್ರೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಡಿಯೂರಪ್ಪರಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ಕರ್ನಾಟಕದ ಇತಿಹಾಸದಲ್ಲೇ ಯಾರು ಕಂಡಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದಾರೆ. ಈಗ ಮಗ ವಿಜಯೇಂದ್ರ ಆರ್ಟಿಜಿಎಸ್ ಮೂಲಕ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶಪ್ರೇಮದ ಪಾಠ ಮಾಡುವ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನು ಒಮ್ಮೆ ತಿರುಗಿ ನೋಡಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ತ್ಯಾಗ, ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರೆಸ್ಸೆಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಶಾಸಕ ಯುಟಿ ಖಾದರ್, ಮಾಜಿ ಶಾಸಕರಾದ ಮೊಯಿದ್ದೀನ್ ಬಾವ, ಅಭಯ್ ಚಂದ್ರ ಜೈನ್, ರಮಾನಾಥ ರೈ, ಗೋಪಾಲ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಪುಷ್ಪ ಅಮರ್ ನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ಎಂ.ಎ ಗಫೂರ್, ಮಿಥುನ್ ರೈ , ವೆರೋನಿಕಾ ಕರ್ನೆಲಿಯೋ, ಮಲ್ಯಾಡಿ ಶಿವರಾಮ ಶೆಟ್ಟಿ, ಯುಸಿ ಶೆಖಬ್ಬ, ಎಂಪಿ ಮೊಯಿದಿನಬ್ಬ, ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.