ಮಲ್ಪೆ: ಮೂರು ನಕಲಿ ಪೊಲೀಸರ ಬಂಧನ

ಮಲ್ಪೆ: ಸಾರ್ವಜನಿಕರನ್ನು ಬೆದರಿಸಿ ವಂಚಿಸುತ್ತಿದ್ದ ಮೂವರು ನಕಲಿ ಪೊಲೀಸರನ್ನು ಮಲ್ಪೆ ಪೊಲೀಸರು ಫೆ. 15ರಂದು ರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಆಂಧ್ರ ಮೂಲದ ರಾಘಸಂದೇಶ (35), ಪ್ರೇಮ್ ಕುಮಾರ್ ಹಾಗೂ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಖಾಸಗಿ ವಾಹನಕ್ಕೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಮಲ್ಪೆಯಿಂದ ವಡಬಾಂಢೇಶ್ವರ ಕಡೆಗೆ ಹೋಗುತ್ತಿದ್ದ ಸಿಟಿ ಬಸ್ ನ್ನು ಅಡ್ಡ ಹಾಕಿ ರಾಘಸಂದೇಶ ಎಂಬಾತ ತಾನು ಪೊಲೀಸ್ ಕಮಿಷನರ್ ಎಂದು ಚಾಲಕನಿಗೆ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರು ಇವರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಗ ಇವರು ಯಾವುದೇ ಸರ್ಕಾರಿ ಅಧಿಕಾರಿ ಆಗಿರದೆ, ಸಾರ್ವಜನಿಕ ವ್ಯಕ್ತಿಯಾಗಿರುವುದು ಗೊತ್ತಾಗಿದೆ. ಈ ಮೂವರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕಿ ವಂಚಿಸಿದ ಆರೋಪದಡಿ ಬಂಧಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.