ಅಬ್ಬಾ..ಏನ್ ಬಿಸಿಲಪ್ಪಾ… ಎಷ್ಟು ನೀರ್ ಕುಡಿದ್ರೂ ಸಾಲಲ್ಲ ಅನ್ನೋ ಬೇಸಿಗೆಕಾಲವಿದು. ಹೌದು, ಬೇಸಿಗೆ ಬಂದೊಡನೆ ನೀರಿನ ದಾಹವೂ ಹೆಚ್ಚಾಗುತ್ತೆ. ಸಾವಿರಾರು ರೂಪಾಯಿ ಕೊಟ್ಟು ತೆಗೆದುಕೊಂಡಿರುವ ಪ್ರಿಡ್ಜ್ ಕೂಡ ಮಡಿಕೆಗಳ ಮುಂದೆ ಮಂಕಾಗುತ್ತೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಮಡಿಕೆಯಲ್ಲಿಟ್ಟ ತಂಪು ನೀರು ಕುಡಿದರೆ ಸಮಾಧಾನ ಅನ್ನಿಸುತ್ತೆ. ನಮಗೆ ಸಮಾಧಾನ ಕೊಡುವ ಆ ಮಡಕೆ ಕುಡಿಕೆಗಳ ಮಾಡುತ್ತಾ ಜೀವನ ಸಾಗಿಸುತ್ತಿರುವ ದಂಪತಿಯ ಒಂದು ಕಥೆ ಕೇಳಿ.
ಯಜಮಾನನ ಹೆಸರು ಸುಂದರ ಮೂಲ್ಯ. ಅವರ ಪತ್ನಿಯ ಹೆಸರು ಜಲಜ ಮೂಲ್ಯ. ಕಾರ್ಕಳ ತಾಲೂಕಿನ ಅಜೆಕಾರು ಮಂಗಳ ನಗರದವರು. ಸುಂದರ ಮೂಲ್ಯ ಹದಿನೈದು ವರ್ಷದವರಿದ್ದಾಗಲೇ ತಂದೆ ಕುಂಬಾರಿಕೆಯನ್ನು ಆರಂಭಿಸಿದ್ದರು. ಈಗ ಅರವತ್ತೆಂಟು ವರ್ಷ ಇವರಿಗೆ, 54 ವರ್ಷದ ಸುದೀರ್ಘ ಅನುಭವ ಹೊಂದಿರುವ ಹಿರಿಜೀವ. ಅವರ ಸಹಾಯಕ್ಕೆ ಬೆನ್ನೆಲುಬಾಗಿ ನಿಂತವರು ಅವರ ಶ್ರೀಮತಿ ಜಲಜ ಮೂಲ್ಯ .
ಹಳೆಯ ಮರದ ಚಕ್ರದ ಬದಲು ಹೊಸದಾದ
ಎಲೆಕ್ಟ್ರಿಕ್ ವೀಲ್ ಬಳಸಿ ಮಣ್ಣಿಗೆ ಮಡಿಕೆಯ ಆಕಾರ ನೀಡುತ್ತಾರೆ ಈ ದಂಪತಿ.
ಅಡುಗೆ ಮನೆಗೆ ಬೇಕಾದ ಪಾತ್ರೆಗಳು , ದೇವರ ಕೆಲಸ, ನಾನಾ ನಮೂನೆಯ ಮಣ್ಣಿನ ಪರಿಕರ ತಯಾರಿಯಲ್ಲಿ ಇವರು ಸಿದ್ಧಹಸ್ತರು. ಕಳೆದ54 ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದವರು. ಮಣ್ಣಿನ ಪಾತ್ರೆಗಳಿರುವ ಜಾಗದಲ್ಲೀಗ ಸ್ಟೀಲ್, ಅಲ್ಯೂಮಿನಿಯಂ ಇನ್ನಿತರ ಪರಿಕರಗಳು ಬಂದು ಕೂತಿದ್ದರೂ, ಗ್ರಾಮೀಣ ಭಾಗದಲ್ಲಿ ಮಣ್ಣಿನ ಪಾತ್ರೆ ಸಹಿತ ಇನ್ನಿತರ ಪರಿಕರ ಖರೀದಿ ಮಾಡುವವರಿದ್ದಾರೆ. ಅದರಲ್ಲೂ ಕೆಲವೊಂದು ಧಾರ್ಮಿಕ ಆಚರಣೆಗೆ ಮಣ್ಣಿನ ಪರಿಕರಗಳು ಇವೆ.
ಮಣ್ಣಿನ ಹೂಜಿ ದೀಪಸ್ತಂಭ, ಬಾಣಲೆ, ಮಡಕೆ, ಬಿಸಲೆ, ಹಣತೆ, ಬಿಸಿ ನೀರಿನ ಸ್ನಾನಕ್ಕೆ ತಯಾರಿಸಿದ ನಾನಾ ಸೈಜಿನ ಹಂಡೆ, ಮಣ್ಣಿನ ಸಣ್ಣ ಮಡಕೆ, ಓಡು ದೋಸೆ ಕಾವಲಿ, ವಿವಿಧ ಆಕೃತಿಯ ಮಣ್ಣಿನ ಕೊಡ, ಚಟ್ಟಿ, ಮರಾಯಿ, ಅಡುಗೆ ಮಡಕೆ, ಹಾಲು ಕಾಯಿಸುವ ಪಾತ್ರೆ, ಕವಚ, ಗಿಂಡಿ, ಗೋಪುರ, ಬಾಣಿ, ದೂಪ, ಮೊಗೆ, ಕಾವಲಿ, ಕಡಾಯಿ, ಹೂದಾನಿ ಮಣ್ಣಿನ ಪರಿಕರಗಳು ಇಲ್ಲಿ ತಯಾರಾಗುತ್ತದೆ.
ದಶಕದ ಹಿಂದೆ ಮನೆ ಮನೆಗೆ ತಿರುಗಿ ಮಣ್ಣಿನ ಮಡಕೆ ಮಾರಾಟ ಮಾಡುವ ಪದ್ಧತಿಯಿತ್ತು. ಈಗ ಅದು ಬಹುತೇಕ ವಿರಳ. ಪ್ರಸ್ತುತ ಸಂತೆ, ಜಾತ್ರೆಗಳಿಗೆ ಇವರು ಹೋಗುತ್ತಿದ್ದಾರೆ. ಇಂತಹುದೇ ನಮೂನೆಯ ಮಣ್ಣಿನ ಸಾಧನ ಬೇಕು ಎಂದು ತಿಳಿಸಿದರೆ ತಯಾರಿಸಿ ಮನೆಗೆ ತಲುಪಿಸುತ್ತಿದ್ದಾರೆ. ಮಣ್ಣಿನ ಮಡಕೆ ತಯಾರಿಗೆ ಬೇಕಾದ ಕೊಜೆ ಮಣ್ಣು ಕಾಪು ಭಾಗದಿಂದ ತರಬೇಕು. ಕೊಜೆ ಮಣ್ಣಿನ ಜೊತೆಗೆ ಜೇಡಿ ಮಣ್ಣನ್ನು ಸೋಸಿ ತೆಗೆದು ಮಿಶ್ರಣ ಮಾಡಿ ಹದಗೊಳಿಸಿ ಮಣ್ಣಿನ ಪರಿಕರ ತಯಾರಿಸುತ್ತಾರೆ.
ನನ್ನ ತಂದೆಯೇ ನನ್ನ ಗುರು. ಅವರ ಶ್ರಮಕ್ಕೆ ಸುಮಾರು
ವರ್ಷಗಳಿಂದಲೂ ನಾನು ಕುಂಬಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ’ ಎನ್ನುತ್ತಾರೆ ಸುಂದರ ಮೂಲ್ಯ .
ಇದರ ಜೊತೆಗೆ ಸಾವಯವ ಕೃಷಿ ಬಸಳೆ , ಕೋಳಿಸಾಕಾಣಿಕೆ ಮಾಡುತ್ತಾ ಜೀವನ ಸಾಗಿಸುತಿದ್ದಾರೆ.
ಅವರ ಸಂಪರ್ಕ 87623 62617
— ರಾಂ ಅಜೆಕಾರು ಕಾರ್ಕಳ