ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಹಿಮಸ್ಫೋಟ ಸಂಭವಿಸಿದ್ದು, ಏಕಾಏಕಿಯಾಗಿ ಹಿಮಪ್ರವಾಹ ಉಂಟಾದ ಪರಿಣಾಮ 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ಪ್ರವಾಹದಿಂದ ಧೌಲಿಗಂಗಾ ನದಿಯಲ್ಲಿನ ಹಿಮದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ನೈಸರ್ಗಿಕ ವಿಕೋಪ ಕೇಂದ್ರ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರವಾಹದ ಕುರಿತು ಹೈ ಅಲರ್ಟ್ ಘೋಷಣೆ ಮಾಡಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ.
150 ಮಂದಿ ನಾಪತ್ತೆ
ರೈಣಿ ಗ್ರಾಮದ ಬಳಿ ಭಾರಿ ಹಿಮಕುಸಿತದಿಂದ ಅವಾಂತರ ಸೃಷ್ಟಿಯಾಗಿದ್ದು, ಈಗಾಗಲೇ ಧೌಲಿಗಂಗಾ ನದಿ ಪ್ರವಾಹದಿಂದ ಹಲವು ಮನೆಗೆ ಹಾನಿಯಾಗಿದೆ. ಋಷಿಗಂಗಾ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ಈವರೆಗೆ ಸುಮಾರು 150 ಜನ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಿಮಸ್ಪೋಟಕ್ಕೆ ತುತ್ತಾಗಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್, ಐಟಿಬಿಪಿ ಸಿಬ್ಬಂದಿ ಆಗಮಿಸಿದ್ದಾರೆ. ನದಿಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಜೊತೆಗೆ ಪ್ರವಾಹದಲ್ಲಿ 2 ಸೇತುವೆಗಳು ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.












