ಎಂಟು ವರ್ಷಗಳ ಹಿಂದೆ ಎಟಿಎಂನಲ್ಲಿ‌ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿನ ಕಾರ್ಪೊರೇಷನ್‌ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿ ಮಧುಕರ್‌ ರೆಡ್ಡಿಗೆ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಸೋಮವಾರ 65ನೇ ಸೆಷನ್ಸ್‌ ನ್ಯಾಯಾಲಯ ಮಧುಕರ ರೆಡ್ಡಿ ದೋಷಿ ಎಂದು ಹೇಳಿ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಈ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ರಾಜೇಶ್ವರ ಅವರು, ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ದೋಷಿ ಎಂದು ತೀರ್ಪು ನೀಡಿದ್ದರು. ಪ್ರಾಸಿಕ್ಯೂಷನ್‌ ಪರವಾಗಿ ಎಂ.ವಿ.ತ್ಯಾಗರಾಜ್‌ ವಾದ ಮಂಡಿಸಿದ್ದರು.

ಏನಿದು ಪ್ರಕರಣ?
ಬೆಂಗಳೂರಿನ ಕಾರ್ಪೊರೇಷನ್‌ ಬ್ಯಾಂಕ್ ಉದ್ಯೋಗಿ ಜ್ಯೋತಿ 2013ರ ನವೆಂಬರ್‌ 19ರ ಬೆಳಗ್ಗೆ 7ರ ಸುಮಾರಿಗೆ ಕಾರ್ಪೊರೇಷನ್‌ ಸರ್ಕಲ್‌ನಲ್ಲಿರುವ ಬ್ಯಾಂಕ್‌ ಎಟಿಎಂಗೆ ಬಂದಿದ್ದರು. ಈ ವೇಳೆ ಒಳ ನುಗ್ಗಿದ್ದ ಮಧುಕರ್‌ ರೆಡ್ಡಿ ಜ್ಯೋತಿ ಉದಯ್‌ ಮೇಲೆ ಹಣ ನೀಡುವಂತೆ ಬೆದರಿಸಿದ್ದ. ಇದಕ್ಕೆ ನಿರಾಕರಿಸಿದಾಗ ಭೀಕರವಾಗಿ ಮಚ್ಚಿನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಈ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ತೀವ್ರ ಹಲ್ಲೆಗೊಳಗಾದ ಜ್ಯೋತಿ ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಬ್ಯಾಂಕ್ ಸಿಬ್ಬಂದಿ‌ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ತಿಂಗಳ ನಂತರ ಜ್ಯೋತಿ ಅವರು ಗುಣಮುಖರಾಗಿದ್ದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು.

4 ಲಕ್ಷ ರೂ. ಖರ್ಚು ಮಾಡಿ ಪ್ರಯತ್ನ ನಡೆಸಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಹಿಂದೆ ‘ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸ್‌ ಇಲಾಖೆಯು ಸುಳಿವು ನೀಡಿದವರಿಗೆ 12 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

ಅದರಂತೆ ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರು 2017ರ ಫೆಬ್ರವರಿ ಕೊನೆ ವಾರದಲ್ಲಿ ಮಧುಕರ್‌ ರೆಡ್ಡಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು.

ಅಪರಾಧಿ ಮಧುಕರ್ ರೆಡ್ಡಿ, ಈಗಾಗಲೇ ಮೂರು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಇನ್ನು 7 ವರ್ಷ ಮಾತ್ರ ಆತ ಶಿಕ್ಷೆ ಅನುಭವಿಸುವುದು ಬಾಕಿ ಇದೆ.