ಫೆ.1ರಿಂದ 9ರಿಂದ 12ನೇ ತರಗತಿಗೆ ಪೂರ್ಣಾವಧಿ ಬೋಧನೆ: ಸುರೇಶ್ ಕುಮಾರ್

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ 9 ಮತ್ತು 11ನೇ ತರಗತಿಗಳನ್ನು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ಬೋಧನೆ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 10 ಮತ್ತು 12ನೇ ತರಗತಿಗಳೂ ಸಹ ಮೊದಲಿನಂತೆ ಪ್ರತಿದಿನ ಪೂರ್ಣ ಆವಧಿಯಲ್ಲಿ ನಡೆಯಲಿವೆ ಎಂದರು.

ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸ್ತುತ 9ರಿಂದ 12ವರೆಗಿನ ತರಗತಿಗಳು ಪೂರ್ಣ ಅವಧಿಯಲ್ಲಿ ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ. ಹಾಗೆಯೇ 6ರಿಂದ 8ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳು ಈಗ ನಡೆಯುತ್ತಿರುವಂತೆ ಮುಂದುವರೆಯಲಿವೆ ಎಂದು ಸಚಿವರು ಹೇಳಿದರು.

ಈಗಾಗಲೇ ಆರಂಭವಾಗಿರುವ 12ನೇ ತರಗತಿಯ ಸರಾಸರಿ ಶೇ. 75, 10ನೇ ತರಗತಿಯ ಶೇ.70, 6ರಿಂದ 9ನೇ ತರಗತಿಯ ವಿದ್ಯಾಗಮ ತರಗತಿಯ ಹಾಜರಾತಿ ಶೇ. 45ರಷ್ಟು ಹಾಜರಾತಿ ಇರುವ ಅಂಶವನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ 9 ಮತ್ತು 11ನೇ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ:
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸುರೇಶ್ ಕುಮಾರ್, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 14ರಿಂದ ಜೂನ್ 25ರವರಗೆ ನಡೆಯಲಿವೆ. ಜೂ. 14- ಪ್ರಥಮ ಭಾಷೆ, ಜೂ. 16- ಗಣಿತ, ಜೂ. 18-ದ್ವಿತೀಯ ಭಾಷೆ, ಜೂ. 21- ವಿಜ್ಞಾನ, ಜೂ. 23- ತೃತೀಯ ಭಾಷೆ, ಜೂ. 25- ಸಮಾಜ ವಿಜ್ಞಾನ ಪತ್ರಿಕೆಗಳ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

ದ್ವಿತೀಯ ಪಿಯು ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಅಂತಿಮಗೊಳಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವರು ವಿವರಿಸಿದರು.

ಸಿಎಂ ಜೊತೆ ಚರ್ಚಿಸಿ ಶುಲ್ಕ ನಿಗದಿ
ಶಾಲಾ ಶುಲ್ಕ ನಿಗದಿ ಕುರಿತಂತೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.