ಉಡುಪಿ: ಬಿಜೆಪಿ ಉಡುಪಿ ನಗರ ಮತ್ತು ಮುಕ್ತವಾಹಿನಿ ಜಂಟಿ ಆಶ್ರಯದಲ್ಲಿ ಕಳೆದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ದೀಪಾವಳಿ ಕುಟುಂಬ ಆಚರಣೆಯ ಛಾಯಾಚಿತ್ರ ಸ್ಪರ್ಧೆ ‘ದೀಪಾಂಜಲಿ’ ಯ ಸ್ಪರ್ಧಾ ವಿಜೇತರಿಗೆ ಬುಧವಾರ ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಸಂಜೀವ ರಾವ್ ಕಲ್ಯಾಣಪುರ, ಸಿಂಧು ಗುಂಡಿಬೈಲು ಮತ್ತು ಶ್ರೀನಿವಾಸ್ ಶೆಟ್ಟಿಗಾರ್ ಬಡಗುಬೆಟ್ಟು ಕುಟುಂಬದ ಸದಸ್ಯರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದರು. ಶಾಸಕ ಕೆ. ರಘುಪತಿ ಭಟ್ ವಿಜೇತರಿಗೆ ಬಹುಮಾನ ವಿತರಿಸಿದರು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಯಶ್ ಪಾಲ್ ಸುವರ್ಣ, ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಮುಕ್ತವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಯಶವಂತ್ ಸುವರ್ಣ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಸಲೀಂ ಅಂಬಾಗಿಲು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ ಮತ್ತು ದಿನೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.