ಅತ್ತೂರು ವಾರ್ಷಿಕ ಮಹೋತ್ಸವದ ಹತ್ತನೇ ದಿನ: ಒಳಿತನ್ನು ಮಾಡಲು ಧರ್ಮ, ದೇಶ, ಜನಾಂಗಗಳ ಗಡಿ ಮೀರಿ ಸಾಗೋಣ: ಬಿಷಪ್ ಜೆರಾಲ್ಡ್ ಲೋಬೊ

ಅತ್ತೂರು: ನಾವು ಬಡವರಿಗೆ ಮಾಡಿದ ಒಳಿತಿನ ಪ್ರತಿಫಲವನ್ನು ದೇವರು ನಮಗೆ ನೂರ್ಮಡಿಯಾಗಿ ಹಿಂದಿರುಗಿಸುತ್ತಾರೆ. ನಮ್ಮ ಸಹೋದರ ಸಹೋದರಿಯರಿಗೆ ಒಳಿತನ್ನು ಮಾಡುವ ಯಾವುದೇ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಲೋಕದ ಅಸಂಖ್ಯಾತ ಜನರು ನಮ್ಮ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದಲ್ಲಿ ದಿನದ ಪ್ರಮುಖ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಹತ್ತನೇ ದಿನವಾದ ಬುಧವಾರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಬಲಿಪೂಜೆಗಳು ಸುಸೂತ್ರವಾಗಿ ನಡೆದವು. ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ಆಶೀರ್ವಚನವನ್ನು ಪಡೆದರು. ಅಸ್ವಸ್ಥರಿಗಾಗಿ ಹಾಗೂ ವೃದ್ಧರಿಗಾಗಿ ಪ್ರಾರ್ಥಿಸಲಾಯಿತು.

ಹಬ್ಬದ ಸಂಭ್ರಮಿಕ ಗಾಯನ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊರವರು ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. ಬಸಿಲಿಕದ ಪ್ರಧಾನ ಗುರು ಫಾದರ್ ಜಾರ್ಜ್ ಡಿಸೋಜಾ, ಸಹಾಯಕ ಗುರು ಫಾದರ್ ರೊಯ್ ಮೆಲ್ವಿಲ್ ಲೋಬೊ ಹಾಗೂ ಇತರ ಗುರುಗಳು ಧರ್ಮಾದ್ಯಕ್ಷರೊಡನೆ ಬಲಿಪೂಜೆಯಲ್ಲಿ ಪಾಲ್ಗೊಂಡರು.

ದಿನದ ಇತರ ಬಲಿಪೂಜೆಗಳನ್ನು ಅಲಂಗಾರಿನ ಫಾದರ್ ವಾಲ್ಟರ್ ಡಿಸೋಜಾ, ಉಡುಪಿ ಶೋಕಮಾತಾ ಚರ್ಚಿನ ಫಾದರ್ ಚಾರ್ಲ್ಸ್ ಮಿನೇಜಸ್, ಕಲ್ಯಾಣಪುರ ಮಿಲಾಗ್ರಿಸ್‍ನ ಫಾದರ್ ವಲೇರಿಯನ್ ಮೆಂಡೋನ್ಸ ಹಾಗೂ ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ಬಿಜೈನ ಕಪುಚಿನ್ ಗುರು ಫಾದರ್ ಪಾವ್ಲ್ ಮೆಲ್ವಿನ್ ಡಿಸೋಜಾರವರು ನೆರವೇರಿಸಿದರು.