ಉಡುಪಿ: ಸಹಕಾರ ಭಾರತಿ ಉಡುಪಿ ತಾಲೂಕು ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ದಿನೇಶ್ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಉಡುಪಿ ನಿರ್ಮಾಣ ಸೌಹಾರ್ದ ಸಹಕಾರಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಭಾಗ ಸಂಘಟನಾ ಪ್ರಮುಖ ಕುಂಬ್ಳೆಕಾರ್ ಮೋಹನ್ ಕುಮಾರ್, ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಪ್ರಯುಕ್ತ ಪರಾಕ್ರಮ ದಿನಾಚರಣೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಸಾವರ್ಕರ್ ಅವರ ದೇಶ ಭಕ್ತಿಯ ಬಗ್ಗೆ ತಿಳಿಸಿದರು. ಮುಂದಿನ ನವ ಪೀಳಿಗೆಗೆ ಒಳ್ಳೆಯ ಆಚಾರ ವಿಚಾರಗಳನ್ನು ಮನವರಿಕೆ ಮಾಡುವ ಸದಸ್ಯರ ಕರ್ತವ್ಯ ಹಾಗೂ ಸಮಾಜದಲ್ಲಿರುವ ಶೋಷಿತರ ದೀನ ದಲಿತರ ಸೇವೆಗೆ ಸಹಕಾರಿ ರಂಗ ಮುಂದಾಗಬೇಕು. ಎಲ್ಲ ಸದಸ್ಯರು ಸಮಾಜ ಸೇವೆ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ, ಸಹಕಾರ ಭಾರತಿಯ ಹಿನ್ನೆಲೆ, ಆರಂಭದಲ್ಲಿನ ಘಟನೆ ಗಳು ಹಾಗೂ ಸಹಕಾರಿಗಳಲ್ಲಿ ಸಮಗ್ರ ರಾಷ್ಟ್ರೀಯ ಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆಯನ್ನು ಮೂಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂದನ ನಾಯಕ್, ಪ್ರಶಾಂತ್ ಉಪಸ್ಥಿತರಿದ್ದರು. ಉಡುಪಿ ತಾಲೂಕು ಸಹಕಾರಿ ಭಾರತಿಯ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಕಾಮತ್ ಎಳ್ಳಾರೆ ವಂದಿಸಿದರು. ಕೋಶಾಧಿಕಾರಿ ಶಶಿಧರ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.