ಸಹಕಾರ ಭಾರತಿ ಗ್ರಾಮ ವಿಕಾಸದ ಕಡೆಗೆ ಹೆಚ್ಚಿನ ಒತ್ತು ನೀಡಲಿ: ಜಿತೇಂದ್ರ ಪ್ರತಾಪನಗರ

ಬ್ರಹ್ಮಾವರ: ಗ್ರಾಮೀಣ ಪ್ರದೇಶ ಭಾರತೀಯ ಸಂಸ್ಕೃತಿಯ ಬುನಾದಿ. ಸಹಕಾರಿ ಸಂಘವು ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಪರಿಪೂರ್ಣ ಗ್ರಾಮವಿಕಾಸ ಯೋಜನೆಯಡಿ ಕೆಲಸ ಮಾಡಿದರೆ ಈ ದೇಶ ರಾಮರಾಜ್ಯ ಆಗಲು ಸಾಧ್ಯ. ಈ ದಿಸೆಯಲ್ಲಿ ಸಹಕಾರ ಭಾರತಿ ಗ್ರಾಮ ವಿಕಾಸದ ಕಡೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಗ್ರಾಮ ವಿಕಾಸ ವಿಭಾಗ ಪ್ರಮುಖ್ ಜಿತೇಂದ್ರ ಪ್ರತಾಪನಗರ ಹೇಳಿದರು.

ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಇದರ ವತಿಯಿಂದ ಸೈಬ್ರಾಕಟ್ಟೆಯ ಹೋಟೆಲ್ ಸ್ವಾಗತ ಸಭಾಂಗಣದಲ್ಲಿ ಭಾನುವಾರ ನಡೆದ ಸಹಕಾರ ಭಾರತಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಮಾತನಾಡಿದರು‌.

ಸಹಕಾರಿ ಸಂಸ್ಥೆಯಲ್ಲಿ ಆಡಳಿತವು ಸ್ಥಳೀಯರದ್ದೇ ಆಗಿರುವುದರಿಂದ ಮತ್ತು ಧನಮೂಲವೂ ಇಲ್ಲಿಯೇ ಇರುವುದರಿಂದ ಗ್ರಾಮ ವಿಕಾಸ ಸುಲಭ ಸಾಧ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಹೈನುಗಾರರ ವಿವಿದೋದ್ದೇಶ ಸಹಕಾರ ಸಂಘವಾಗಿ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘವನ್ನು ರೈತರ ವಿವಿದೋದ್ದೇಶ ಸಹಕಾರ ಸಂಘವೆಂದು ಮಾರ್ಪಾಡು ಮಾಡುವಂತೆ ಸಲಹೆ ನೀಡಿದರು.

ಸಹಕಾರ ಭಾರತೀಯ ವಿಭಾಗ ಸಂಘಟನೆ ಪ್ರಮುಖ ಮೋಹನ್ ಕುಂಬ್ಳೆಕರ ಸಹಕಾರ ಭಾರತಿಯ ಬಗ್ಗೆ ಮಾಹಿತಿ ನೀಡಿದರು.

ಸಹಕಾರ ಭಾರತಿಯ ಬ್ರಹ್ಮಾವರ ತಾಲೂಕಿನ ಅಧ್ಯಕ್ಷ ಅಶೋಕ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಜಿಲ್ಲಾ ಸಂಘಟನಾ ಪ್ರಮುಖ ಮಂಜುನಾಥ್ ಎಸ್ ಕೆ, ಜಿಲ್ಲಾ ಗ್ರಾಮ ವಿಕಾಸ್ ಪ್ರಮುಖ ಪ್ರಮೋದ್ ಶೆಟ್ಟಿ ಮಂದಾರ್ತಿ, ಸಹಕಾರ ಭಾರತಿ ಜಿಲ್ಲಾ ಹಾಲು ಪ್ರಕೋಷ್ಟ ಪ್ರಮುಖ ಸಾಣೂರು ನರಸಿಂಹ ಕಾಮತ್, ಸಹಕಾರ ಭಾರತಿ ದ.ಕ. ಜಿಲ್ಲಾ ಕಾರ್ಯದರ್ಶಿ ಕೃಷ್ಣ ಕೋಂಪದವು, ಫ್ಯಾಕ್ಸ್ ಸಹಕಾರಿಯ ಅಧ್ಯಕ್ಷರು ಹಾಗೂ ಇತರ ಸಹಕಾರಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಸಹಕಾರ ಭಾರತಿ ಬ್ರಹ್ಮಾವರ ತಾಲೂಕಿನ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ. ನಾಯ್ಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು.