ಕಾರ್ಕಳ: ಕೋವಿಡ್ 19 ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿಯ ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದಲ್ಲಿ ಅಂಗಡಿ-ಮುಂಗಟ್ಟು, ಜಾತ್ರೆ-ಸಂತೆಗಳಿಗೆ ಅವಕಾಶ ನೀಡಿಲ್ಲ. ಆದರೂ ಪ್ರತಿವರ್ಷದಂತೆ ಕ್ಷೇತ್ರದಲ್ಲಿ ಜನಸಂದಣಿ ಇಲ್ಲದಿದ್ದರೂ ಗಣನೀಯ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಸಂತೆಯಲ್ಲಿ ತಿರುಗಾಡುವುದಕ್ಕೆ ಅಲ್ಲ, ಸಂತರಿಗಾಗಿ ಅತ್ತೂರು ಪುಣ್ಯಕ್ಷೇತ್ರ ಬಂದಿದ್ದೇವೆ ಎಂಬ ಮಾತುಗಳು ಭಕ್ತಾದಿಗಳಿಂದ ಸಾಮಾನ್ಯವಾಗಿ ಕೇಳಿಬರುತ್ತಿವೆ.
ಜ. 18ರಿಂದ ಆರಂಭಗೊಂಡಿರುವ ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದ ಆರನೇ ದಿನವಾದ ಭಾನುವಾರ ಐದು ಬಲಿಪೂಜೆ ನೆರವೇರಿದ್ದು, ಗಣನೀಯ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.
ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದು ಪುಣ್ಯಕ್ಷೇತ್ರದ ಮೇಲೆ ಭಕ್ತಾದಿಗಳಿಗೆ ಇರುವ ಶ್ರದ್ಧಾಭಕ್ತಿಯ ಪ್ರತೀಕವಾಗಿದೆ. ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗೆ ವಿಶೇಷ ಪ್ರಾರ್ಥನೆ ನಡೆದವು.