ಮದನಪಲ್ಲಿ: ಮೂಢನಂಬಿಕೆಯ ಕೂಪಕ್ಕೆ ಜೋತುಬಿದ್ದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ದಂಪತಿಗಳು ತಾವು ಹೆತ್ತು ಸಾಕಿದ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಟ್ಟ ಅಮಾನವೀಯ ಕೃತ್ಯ ಆಂಧ್ರಪ್ರದೇಶದ ಮದನಪಲ್ಲಿ ಹೊರವಲಯದಲ್ಲಿರುವ ಶಿವ ನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಶಿವನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಿವಾಸಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಎಂಬುವವರೇ ಈ ನೀಚಾ ಕೃತ್ಯ ಎಸಗಿದ ದಂಪತಿ. ಇಬ್ಬರೂ ಉನ್ನತ ಶಿಕ್ಷಣ ಪಡೆದವರಾಗಿದ್ದು, ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿದ್ದರೆ ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದನು.
ಇವರ ಹಿರಿಯ ಮಗಳು ಅಲೈಕ್ಯ (27) ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಕಿರಿಯ ಪುತ್ರಿ ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಲ್ಲದೆ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈಕೆ ಕೋವಿಡ್ ಲಾಕ್ ಡೌನ್ ನಂತರ ಮನೆಗೆ ಮರಳಿದ್ದರು.
ಕೋವಿಡ್ -19 ಕಂಡುಬಂದ ನಂತರದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಮನೆಯಲ್ಲೇ ಕಳೆಯುತ್ತಿದ್ದ ಪದ್ಮಜಾ-ಪುರುಷೋತ್ತಮ್ ದಂಪತಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ (ಜ. 24) ಮನೆಯಿಂದ ವಿಚಿತ್ರವಾದ ಮತ್ತು ದೊಡ್ಡ ಶಬ್ದಗಳನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ದಂಪತಿಗಳು ಪೊಲೀಸರನ್ನು ಮನೆಗೆ ಪ್ರವೇಶಿಸದಂತೆ ತಡೆದರು.
ಪೊಲೀಸರು ಮನೆಯೊಳಗೆ ಪ್ರವೇಶಿದ ವೇಳೆ ಒಬ್ಬ ಯುವತಿ ಪೂಜಾಕೋಣೆಯಲ್ಲಿ ಶವವಾಗಿದ್ದರೆ, ಇನ್ನೊಬ್ಬಳು ಇನ್ನೊಂದು ಕೋಣೆಯಲ್ಲಿ ಹೆಣವಾಗಿ ಕಂಡುಬಂದಿದ್ದಾಳೆ. ಎರಡೂ ಶವಗಳ ದೇಹಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿದ್ದು ಅವುಗಳ ಸುತ್ತ ಕೆಲವು ಪೂಜಾ ಸಾಮಗ್ರಿಗಳನ್ನು ಇರಿಸಲಾಗಿತ್ತು.
ಪ್ರಾಥಮಿಕತನಿಖೆಯ ಸಮಯದಲ್ಲಿ, ದಂಪತಿಗಳು ತಮ್ಮ ಹೆಣ್ಣುಮಕ್ಕಳು ಮತ್ತೆ ಜೀವ ಪಡೆಯುತ್ತಾರೆ ಎಂದು ಹೇಳುವ ಮೂಲಕ ಶವಗಳನ್ನು ಒಂದು ದಿನ ಮನೆಯಲ್ಲಿ ಇರಿಸಲು ಒತ್ತಾಯಿಸಿದ್ದರು. ಮದನಪಲ್ಲಿ ಡಿವೈಎಸ್ಪಿ ತಿಳಿಸಿದ್ದಾರೆ.
ಕಲಿಯುಗವು ಇಂದು ರಾತ್ರಿ ಕೊನೆಗೊಳ್ಳಲಿದ್ದು, ಸತ್ಯಯುಗದ ಆರಂಭ ನಾಳೆ ಆಗಲಿದೆ. ಆ ಸಮಯಕ್ಕೆ ಸರಿಯಾಗಿ ಈ ಇಬ್ಬರೂ ಹೆಣ್ಣುಮಕ್ಕಳು ಪುನರ್ಜನ್ಮ ಪಡೆಯಲಿದ್ದಾರೆ. ಹಾಗಾಗಿ ಇವರನ್ನು ಬಲಿ ನೀಡುವಂತೆ ದೈವ ಸಂದೇಶ ನೀಡಿದೆ ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಮದನಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.