ಉಡುಪಿ: ಜಿಲ್ಲೆಯಲ್ಲಿ ತುರ್ತು ಸೇವೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 12 ತುರ್ತು ಪ್ರತಿಕ್ರಿಯಾ ವಾಹನಗಳಿಗೆ (ಇಆರ್ಎಸ್ಎಸ್) ಮಣಿಪಾಲದ ಸಿಂಡಿಕೇಟ್ ಸರ್ಕಲ್ನಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ವಾಹನಗಳಿಗೆ ಚಾಲನೆ ನೀಡಿದರು.
ತುರ್ತು ಸೇವೆಗಳಿಗೆ 112ಕ್ಕೆ ಕರೆ ಮಾಡಿ: ಸಾರ್ವಜನಿಕರು ಇನ್ಮುಂದೆ ಟೋಲ್ ಫ್ರೀ ನಂಬರ್ 100 ರ ಬದಲಾಗಿ 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತೀ ಸಮೀಪ ಇರುವ ಇ.ಆರ್.ಎಸ್.ಎಸ್. ವಾಹನವು ಸದ್ರಿ ಸ್ಥಳಕ್ಕೆ ಬಂದು ಅಗತ್ಯ ಸೇವೆಯನ್ನು ನೀಡಲಿದೆ. ಈ ವಾಹನವು ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸಲಿದೆ.
ಟೋಲ್ ಪ್ರೀ ನಂಬರ್ 112 ನೇರವಾಗಿ ಬೆಂಗಳೂರು ಕೇಂದ್ರದ ನಿಯಂತ್ರಣದಲ್ಲಿದ್ದು, ಅಕ್ಷಾಂಶ ಹಾಗೂ ರೇಖಾಂಶದ ಆಧಾರದ ಮೇಲೆ ಕರೆ ಬಂದ ಸ್ಥಳಕ್ಕೆ ಕ್ಷಿಪ್ರವಾಗಿ ಅಗತ್ಯ ಸೇವೆಯನ್ನು ಸಲ್ಲಿಸಲು ಪ್ರತಿ ವಾಹನದಲ್ಲಿ ಓರ್ವ ಎ.ಎಸ್.ಐ. ದರ್ಜೆಯ ಪೊಲೀಸ್ ಅಧಿಕಾರಿಯವರು ಇರುತ್ತಾರೆ. ಈ ವಾಹನಗಳು ಈ ಹಿಂದೆ ಹೆಚ್ಚಿನ ಅಪರಾಧಗಳು ನಡೆದ ಸ್ಥಳಗಳು, ಶಾಲಾ, ಕಾಲೇಜುಗಳ ಸಮೀಪ, ಜನ ದಟ್ಟಣೆ ಪ್ರದೇಶ, ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದೆ.
ಸಾರ್ವಜನಿಕರು, ಅಪಘಾತ ಅಥವಾ ಯಾವುದೇ ತರಹದ ಅಪರಾಧಗಳು ನಡೆದಲ್ಲಿ ತಕ್ಷಣವೇ ಟೋಲ್ ಪ್ರೀ ನಂಬರ್ 112 ಸಂಖ್ಯೆಗೆ ಕರೆ ಮಾಡುವಂತೆ ಕೋರಲಾಗಿದೆ. ಸಾರ್ವಜನಿಕರು ಅಪಘಾತ, ಕೊಲೆ, ದರೋಡೆ,ಕಳ್ಳತನ, ಸುಲಿಗೆ, ಸರಗಳ್ಳತನ, ಜಗಳ, ಮಹಿಳಾ-ಮಕ್ಕಳ ಹಿರಿಯ ನಾಗರಿಕರ ಹಾಗೂ ಇನ್ನಿತರ ಎಲ್ಲ ರೀತಿಯ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಪೊಲೀಸ್ ನೆರವು, ಅಗ್ನಿಶಾಮಕದಳದ ನೆರವು, ಆ್ಯಂಬುಲೆನ್ಸ್ ನೆರವು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲೆಯ ಯಾವ ಭಾಗದಿಂದ ಕರೆ ಬಂದರೂ ತುರ್ತಾಗಿ ಆ ಸ್ಥಳಕ್ಕೆ ಧಾವಿಸಿ ರಕ್ಷಣೆ ಒದಗಿಸಲಿದೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ನಾಯಕ್, ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಮೂರ್ತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.