ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ: ಇಡೀ ವಿಶ್ವ ಭಾರತವನ್ನು ಭರವಸೆಯಿಂದ ನೋಡುತ್ತಿದೆ- ಪ್ರಧಾನಿ ಮೋದಿ

ನವದೆಹಲಿ: ದೇಶವ್ಯಾಪಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆನ್ ಲೈನ್ ಮೂಲಕ ಚಾಲನೆ ನೀಡಿದರು.

ಬಳಿಕ ದೇಶದ ಜನತೆಯನ್ನುದ್ದೇಶಿ ಮಾತನಾಡಿದ ಅವರು, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ ಎಂದರು.

ಲಸಿಕೆ ಬಂತೆಂದು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರಬೇಡಿ. ಮೊದಲ ಡೋಸ್ ನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಂತರ ಎರಡನೇ ಡೋಸ್ ನೀಡಲಾಗುತ್ತದೆ.

ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ.
ಲಸಿಕೆಯನ್ನು ಎರಡು ಡೋಸ್ ಪಡೆಯುವುದು ಅತೀ ಮುಖ್ಯವೆಂದು ದೇಶದ ಜನತೆಗೆ ಹೇಳಲು ಬಯಸುತ್ತೇನೆ. ಈಗಾಗಲೇ ತಜ್ಞರೂ ಕೂಡ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಎರಡೂ ಲಸಿಕೆಗಳನ್ನು ಪಡೆಯುವುದಕ್ಕೆ ಒಂದು ತಿಂಗಳ ಅಂತರವಿರಬೇಕೆಂದು ಹೇಳಿದ್ದಾರೆ.

ಲಸಿಕೆ ಬಂತೆಂದು ತಪ್ಪಾಗಿ ತಿಳಿದು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರಬೇಡಿ. ಲಸಿಕೆ ಪಡೆದ ಬಳಿಕವೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿರುತ್ತದೆ ಎಂದರು.

ಕೊರೊನಾ ವಿರುದ್ಧ ಹೋರಾಟದ ಅನೇಕ ಹಂತಗಳಲ್ಲಿ ನಾವು ಇಡೀ ವಿಶ್ವಕ್ಕೆ ಉದಾಹರಣೆಯಾಗಿ ನಿಂತಿದ್ದೇವೆ. ಕೊರೋನಾ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ತಮ್ಮ ದೇಶದ ಪ್ರಜೆಗಳನ್ನು ಚೀನಾದಿಂದ ವಾಪಸ್ಸು ಕರೆಸಿಕೊಳ್ಳಲು ಇತರೆ ದೇಶಗಳು ಚಿಂತಿಸುತ್ತಿದ್ದಾಗ ನಾವು ವಂದೇ ಭಾರತ್ ಮಿಷನ್ ಅಡಿಯಲ್ಲಿ ನಮ್ಮ ಪ್ರಜೆಗಳನ್ನು ಮಾತ್ರವೇ ಇಲ್ಲದೆ, ಇತರೆ ದೇಶದ ಪ್ರಜೆಗಳನ್ನು ಕರೆತಂದೆವು ಎಂದು ತಿಳಿಸಿದರು.

ಇಂದು ನಾವು ನಮ್ಮದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಇಡೀ ವಿಶ್ವ ಭಾರತವನ್ನು ಭರವಸೆಯಿಂದ ನೋಡುತ್ತಿದೆ ಎಂದು ಹೇಳಿದರು.