ಕಾರ್ಕಳ: ಹಿಂದೂ ಯುವತಿಯೊಂದಿಗೆ ಚಕ್ಕಂದ ಮಾಡುತ್ತಿದ್ದ ಅನ್ಯ ಕೋಮಿನ ಖಾಸಗಿ ಬಸ್ ನಿರ್ವಾಹಕನೋರ್ವನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಹಿಗ್ಗಾಮುಗ್ಗಾವಾಗಿ ಥಳಿಸಿದ ಘಟನೆ ಇಂದು ಕಾರ್ಕಳ ತಾಲೂಕಿನ ಕುಂಟಾಡಿ ಅಶೋಕ ನಗರದಲ್ಲಿ ನಡೆದಿದೆ.
ಬಸ್ ನಿರ್ವಾಹಕ ಉಡುಪಿ ವಡ್ಡರ್ಸೆ ಎಂ.ಜಿ. ಕಾಲೋನಿ ನಿವಾಸಿ ಶಮೀರ್ ಪರಾಶ್ (20) ಎಂಬವನು ಥಳಿತಕ್ಕೊಳಗಾದ ಯುವಕ. ಈತ ಮೂಡುಬೆಳ್ಳೆಯಿಂದ ಕಾರ್ಕಳ ಬರುವ ಕೃಷ್ಣಪ್ರಸಾದ್ ಬಸ್ ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು. ಇದೇ ಬಸ್ ನಲ್ಲಿ ಹಿಂದೂ ಯುವತಿ ಕಾರ್ಕಳಕ್ಕೆ ಉದ್ಯೋಗಕ್ಕೆ ಬರುತ್ತಿದ್ದಳು.
ಆಕೆಯೊಂದಿಗೆ ಬಸ್ನಲ್ಲಿ ನಿರಂತರವಾಗಿ ಚಕ್ಕಂದವಾಡುತ್ತಿದ್ದ ಎನ್ನಲಾಗಿದೆ. ಈ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ಕುಂಟಾಡಿಯ ಅಶೋಕ ನಗರದಲ್ಲಿ ಬಸ್ ತಡೆದು ನಿಲ್ಲಿಸಿ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಥಳಿತಕ್ಕೊಳಗಾದ ಯುವಕ ಶಮೀರ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಅಶೋಕ್, ಮಾವಿನಕಟ್ಟೆ ಸಂತೋಷ್ ಮತ್ತಿಬ್ಬರು ಬಸ್ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ.