ಮಂಗಳೂರು: ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಂಜೇಶ್ವರದ ವರ್ಕಾಡಿ ಪಂಚಾಯತ್ ನ ತಲಕ್ಕಿ ವಾರ್ಡ್ ನಲ್ಲಿ ಮೂರನೇ ಬಾರಿಗೆ ಎಲ್ ಡಿಎಫ್ ಅಭ್ಯರ್ಥಿಯಾಗಿ ಅತ್ಯಧಿಕ ಮತಗಳಿಂದ ಗೆದ್ದ ಭಾರತಿ ಸತೀಶ್ ಇದೀಗ ಆ ಪಂಚಾಯತ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಗಮನಸೆಳೆದಿದ್ದಾರೆ.
ಮೂಲತಃ ಬಂಟ್ವಾಳದವರಾಗಿರುವ ಭಾರತಿ ಕಡುಬಡತನದಲ್ಲಿ ಬೆಳೆದು ಉತ್ತಮ ಶಿಕ್ಷಣ ಪಡೆದವರು. ಬಡವರ ಏಳಿಗೆಯ ಬಗ್ಗೆ ಶ್ರಮಿಸಬೇಕೆಂಬ ಆಸಕ್ತಿಯಿಂದ ಸಾಮಾಜಿಕ ಕಾರ್ಯಗಳಲ್ಲಿ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.
ವಿವಾಹದ ಬಳಿಕ ಮಂಜೇಶ್ವರದಲ್ಲೂ ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರೆದ ಅವರು ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ಸ್ವೀಕರಿಸಿ ಪಕ್ಷದಲ್ಲೂ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿ ಕಳೆದ ಎರಡು ಅವಧಿಗೆ ವರ್ಕಾಡಿ ಪಂಚಾಯತ್ ಚುನಾವಣೆಗಳಲ್ಲಿ ಗೆದ್ದು ಪ್ರಾಮಾಣಿಕ ಕಾರ್ಯಗಳಿಂದ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು. ಈಗ ಮೂರನೇ ಬಾರಿಗೂ ಆಡಳಿತಾರೂಢ ಎಲ್ ಡಿಎಫ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದ ಅವರು ಇದೀಗ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಭಾರತಿಯವರ ಪತಿ ಸತೀಶ್ ಉಡುಪಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ನಿಸ್ಪೃಹ ಹಾಗೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.