ಉಡುಪಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ನೀಲಾವರ ಗೋಶಾಲೆ ಸ್ವಚ್ಛತೆ, ಗೋ ಪೂಜೆ

ಉಡುಪಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಹಾಗೂ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇದ ಕಾಯ್ದೆಯನ್ನು ಸ್ವಾಗತಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ನೀಲಾವರ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ನೆರವೇರಿಸಲಾಯಿತು.

ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿ, ಅಟಲ್‍ ಬಿಹಾರಿ ವಾಜಪೇಯಿ ಅವರು ಜನನಾಯಕ ಮಾತ್ರವಲ್ಲ, ಅವರು ವಿಶ್ವಮಾನವರಾಗಿದ್ದರು. ಅದಕ್ಕೆ ಅವರ ಸರಳ ವ್ಯಕ್ತಿತ್ವವೇ ಸಾಕ್ಷಿ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದ ಅವರನ್ನು ಅಜಾತ ಶತ್ರು ಎಂದು ದೇಶದ ಜನತೆ ಕರೆಯುತ್ತಿದ್ದರು ಎಂದರು.

ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ ಮಾತನಾಡಿ, ಅಟಲ್‍ಜೀಯವರು ದೇಶದಲ್ಲಿ ಗೋಹತ್ಯೆ ನಿಷೇದ ಆಗುವ ಬಗ್ಗೆ ಬಹಳ ಪ್ರಯತ್ನ ಪಟ್ಟಿದ್ದರು. ಇಂದಿನ ಸಮಯದಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧದಿಂದ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಯತ್ನ ಸಾಕಾರಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಶಾಂತಿನಿಕೇತನ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮತ್ತು ಇನ್ನಿತರ ಯುವಮೋರ್ಚಾ ಜಿಲ್ಲಾ ಮತ್ತು ಮಂಡಲ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.