ಶಿರ್ವ: ಮನುಷ್ಯರಂತೆಯೇ ಪ್ರಕೃತಿಯಲ್ಲಿರುವ ಸಕಲ ಜೀವಸಂಕುಲಗಳಿಗೂ ಭಾವನೆಗಳಿವೆ. ಇವು ಪ್ರಕೃತಿಯ ಸಮತೋಲನತೆಗೂ ಅವಶ್ಯಕ. ಆದ್ದರಿಂದ ನಾವೆಲ್ಲರೂ ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ಹೇಳಿದರು.
ಶಿರ್ವ ಸಂತ ಮೇರಿ ಕಾಲೇಜಿನ ಮಾನವಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಘಟಕವು ಉಡುಪಿಯ ನಮ್ಮ ಮನೆ ನಮ್ಮ ಮರ ಸಂಸ್ಥೆಯ ಸಹಯೋಗದೊಂದಿಗೆ ರೈತರ ದಿನದ ಅಂಗವಾಗಿ ಇಂದು ಕಾಲೇಜಿನಲ್ಲಿ ಆಯೋಜಿಸಿದ ‘ಸಸಿಗಳ ದತ್ತು ಸ್ವೀಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮನೆ, ನಮ್ಮ ಮರ ಸಂಘಟನೆಯ ಸದಸ್ಯ ರವಿರಾಜ್ ಎಚ್.ಪಿ, ಅವಿನಾಶ್ ಕಾಮತ್ ದತ್ತು ಸಸಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಎನ್‍ಎಸ್‍ಎಸ್ ಯೋಜನಾಧಿಕಾರಿಗಳು, ಮಾನವಿಕ ಸಂಘದ ಸಹ ಸಂಯೋಜಕರು ಹಾಗೂ ಸ್ವಯಂ ಸೇವಕರಿಗೆ ಹಸ್ತಾಂತರಿಸಿದರು.ದತ್ತು ಸ್ವೀಕರಿಸಿದ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ನೆಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ, ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಗಿಡಗಳನ್ನು ಬೆಳೆಸುವುದು ಇಂದಿನ ಅವಶ್ಯಕ. ದತ್ತು ಸ್ವೀಕರಿಸಿದ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ಕಾಲೇಜು ವಹಿಸಲಿದೆ ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಮೆಲ್ವಿನ್ ಕ್ಯಾಸ್ತಲಿನೋ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎನ್‍ಎಸ್‍ಎಸ್ ಯೋಜನಾಧಿಕಾರಿಗಳು, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾನವಿಕ ಸಂಘದ ಸಹ ಸಂಯೋಜಕಿ ಪದ್ಮಾಸಿನಿ ಯು. ಸ್ವಾಗತಿಸಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೇಮನಾಥ್ ವಂದಿಸಿದರು. ಸ್ವಯಂ ಸೇವಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.