ಬೆಂಗಳೂರು: ರೂಪಾಂತರಗೊಂಡಿರುವ ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಈಗ ಕರ್ಫ್ಯೂ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಇಂದಿನ ಬದಲು ನಾಳೆಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಇಂದೇ ಕರ್ಫ್ಯೂ ಹೇರಿದರೆ ಜನರಿಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ.
ಸಮಯದಲ್ಲಿ ಬದಲಾವಣೆ:
ಈ ಹಿಂದೆ ಆದೇಶಿಸಲಾದ ಮಾರ್ಗಸೂಚಿಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ ಈಗ ಆದೇಶದಲ್ಲಿ ಬದಲಾವಣೆ ಮಾಡಲಾಗಿದೆ. ಕರ್ಫ್ಯೂ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.
ಬಸ್, ಆಟೊ, ಕಾರು ಸಂಚಾರಕ್ಕೆ ಅನುಮತಿ:
ಸರ್ಕಾರಿ ಹಾಗೂ ಖಾಸಗಿ ಬಸ್ ಗಳಿಗೆ 11 ಗಂಟೆಯ ನಂತರವೂ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹಾಗೆ ಆಟೊ, ಕಾರುಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಸರಕು ವಾಹನಗಳು ಓಡಾಡಬಹುದು.
ಕ್ರಿಸ್ ಮಸ್ ಆಚರಣೆಗೆ ಅಡ್ಡಿಯಿಲ್ಲ:
ಕರ್ಫ್ಯೂನಿಂದ ಕ್ರಿಸ್ಮಸ್ ಹಬ್ಬಕ್ಕೆ ಯಾವುದೇ ತೊಂದರೆ ಆಗಲ್ಲ. ಚರ್ಚ್ ಗಳಲ್ಲಿ ನಡೆಯುವ ಪೂಜೆಗಳಿಗೆ ಯಾವುದೇ ಅಡ್ಡಿಯಾಗಲ್ಲ.