ನವದೆಹಲಿ: ಆಯುಷ್ ಮತ್ತು ಹೋಮಿಯೋಪಥಿ ವೈದ್ಯರು ಮಾತ್ರೆ ಅಥವಾ ಮಿಶ್ರಣಗಳಿಂದ ಕೋವಿಡ್-19 ನಿಯಂತ್ರಣ ಮಾಡಬಹುದು ಎಂದು ಪ್ರಚಾರ ಮಾಡುವಂತಿಲ್ಲ. ಆದರೆ ಚಿಕಿತ್ಸೆಗಾಗಿ ಸರ್ಕಾರದಿಂದ ಅನುಮೋದಿತ ಮಾತ್ರೆಗಳು ಅಥವಾ ಮಿಶ್ರಣಗಳನ್ನು ರೋಗನಿರೋಧಕ ವರ್ಧಕಗಳಾಗಿ ಸೂಚಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಯುಷ್ ವೈದ್ಯರು ಕೋವಿಡ್ಗೆ ಔಷಧಿಗಳನ್ನು ನೀಡುವುದನ್ನು ನಿರ್ಬಂಧಿಸಿ ಕೇರಳ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಡಾ.ಎಕೆಬಿ ಸದ್ಭಾವನ ಮಿಷನ್ ಸ್ಕೂಲ್ ಆಫ್ ಹೋಮಿಯೋ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರ ಪೀಠ ಈ ಆದೇಶ ನೀಡಿದೆ.
ಈ ಔಷಧಿಗಳ ಬದಲಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪರ್ಯಾಯ ಔಷಧಿ ಬಳಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಕೋವಿಡ್ ಅಪಾಯವನ್ನು ಕಡಿಮೆ ಮಾಡಲು ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ ಮತ್ತು ಪ್ರಕೃತಿಚಿಕಿತ್ಸೆಯನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.