ಉಡುಪಿ: ಇಲ್ಲಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1 ಮತ್ತು ಆರ್ಎಎಚ್ ಕಚೇರಿ 1 ಇವರ ಸಹಯೋಗದಲ್ಲಿ ಎರಡು ದಿನಗಳ “ಕೆನರಾ ಗೃಹ ಸಾಲ ಮೇಳ-2020” ಬೃಹತ್ ಗೃಹ ಸಾಲ ಮೇಳ ಉಡುಪಿಯ ಕೆನರಾ ಬ್ಯಾಂಕ್ ಕೋರ್ಟ್ ರಸ್ತೆಯಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ನಡೆಯಿತು.
ಮಾಂಡೋವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಜೆರ್ರಿ ವಿನ್ಸೆಂಟ್ ಡಯಾಸ್ ಮೇಳಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ನಿರ್ಮಾಣ ಸಂಸ್ಥೆಗಳು ನೋಟ್ ಅಮಾನೀಕರಣ, ಜಿಎಸ್ಟಿ, ರೇರಾ, ಕೊರೊನಾದಂತಹ ಹತ್ತು ಹಲವಾರು ಸಮಸ್ಯೆಗಳಿಂದ ಹೆಣಗಾಡುತ್ತಿದೆ. ರಿಯಲ್ ಎಸ್ಟೇಟ್ ಅಭಿವೃದ್ದಿ ಹೊಂದಲು ಬ್ಯಾಂಕಗಳ ಪಾತ್ರ ಅತ್ಯಂತ ಹಿರಿದು. ಇಂತಹ ಸಾಲ ಮೇಳಗಳಿಂದ ನಿರ್ಮಾಣ ಸಂಸ್ಥೆ, ಗ್ರಾಹಕರು ಹಾಗೂ ಬ್ಯಾಂಕ್ ಎಲ್ಲರಿಗೂ ಉಪಯೋಗವಾಗಲಿದೆ ಎಂದರು.
ಭಾರತದಂತಹ ದೇಶದಲ್ಲಿ ಇನ್ನೂ ಕೋಟ್ಯಂತರ ಜನರಿಗೆ ಸ್ವಂತ ಮನೆಯಿಲ್ಲ. ಇಂತಹ ಸಂದರ್ಭದಲ್ಲಿ ಕಡಿಮೆ ವೆಚ್ಚದ ಮನೆಗಳನ್ನು ನಮ್ಮ ಸಂಸ್ಥೆ ನಿರ್ಮಿಸಿ ಗ್ರಾಹಕರಿಗೆ ನೀಡುತ್ತಿದೆ ಇದರಿಂದ ಎಲ್ಲರಿಗೂ ಸೂರು ಸಿಗುವಂತಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ರಾಮ್ ನಾಯ್ಕ ಮಾತನಾಡಿ, ಕಡಿಮೆ ಬಡ್ಡಿ ದರದಲ್ಲಿ ಗರಿಷ್ಟ ಮರು ಪಾವತಿಯೊಂದಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಮೇಳದಲ್ಲಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮನೆ ಖರೀದಿಸಲು ಇದು ಒಳ್ಳೆಯ ಸುಸಂದರ್ಭ. ಇಂತಹ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಗೊಳಿಸುವಂತೆ ವಿನಂತಿಸಿದರು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಗೃಹ ಸಾಲವನ್ನು ನೀಡಲಾಗುತ್ತಿದೆ ಎಂದರು.
ಕೆನರಾ ಬ್ಯಾಂಕ್ ಡಿಜಿಎಂ ಪ್ರದೀಪ ಪೈ
ಮಾತನಾಡಿ, ಬ್ಯಾಂಕ್ ನಿರ್ಮಾಣ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಸೇತುವೆಯಂತೆ ನಿಲ್ಲಲಿದೆ. ಅಂತಹ ಕಾರ್ಯ ಈ ಮೇಳದ ಮೂಲಕ ನಡೆಯಲಿದೆ. ಕೆನರಾ ಬ್ಯಾಂಕ್ ಸಾಮಾನ್ಯ ಸೇವೆಯ ಜೊತೆಗೆ ಸ್ವಲ್ಪ ಹೆಚ್ಚಿನದನ್ನು ನೀಡಲಿದೆ. ಅಲ್ಲದೇ ಬ್ಯಾಂಕ್ ಕಾರ್ಯನಿರ್ವಹಿಸುವಾಗ ಗ್ರಾಹಕರಿಗೆ ಸಮಸ್ಯೆ ಇದ್ದರೂ ಪರಿಹಾರ ನೀಡುವ ಪ್ರಯತ್ನ ಮಾಡಲಿದೆ.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಡಿಜಿಎಂ ಲೀನಾ ಪಿಂಟೋ ಉಪಸ್ಥಿತರಿದ್ದರು.
ಹರೀಶ್ ಎಂ. ವೈ ಸ್ವಾಗತಿಸಿದರು. ಜಯೇಶ ಕಾಮತ್ ಪ್ರಾರ್ಥಿಸಿದರು. ರಮೇಶ್ ಪೈ ವಂದಿಸಿದರು. ಪ್ರತಿಭಾ ಪೈ ಕಾರ್ಯಕ್ರಮ ನಿರ್ವಹಿಸಿದರು.