ಕುಂದಾಪುರ: ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬಂಧಿತರನ್ನು ಮಣೂರು ಚಿಕ್ಕನಕೆರೆ ನಿವಾಸಿ ಚಂದ್ರಶೇಖರ ರೆಡ್ಡಿ (48) ಮತ್ತು ಬ್ರಹ್ಮಗಿರಿ ನಿವಾಸಿ ರತೀಶ್ ಎಮ್ ಕರ್ಕೇರಾ (34) ಎಂದು ಗುರುತಿಸಲಾಗಿದೆ.
ಆರೋಪಿ ಚಂದ್ರಶೇಖರ ರೆಡ್ಡಿ ಪಿಕಪ್ ಹೊಂದಿದ್ದು ಚಾಲಕ ವೃತ್ತಿ ಮಾಡಿಕೊಂಡಿದ್ದು, ಈತನು ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. ಈತನನ್ನು ಫೆ. 14 ರಂದು ಬಂಧಿಸಿದರೆ, ರತೀಶ್ ಕರ್ಕೇರಾ ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ಸಹಕರಿಸಿದ್ದು, ಈತನನ್ನು ಫೆ.12 ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಆಸ್ಪತ್ರೆಯ ಬಳಿ ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದರೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಹದಿನೈಕ್ಕೇರಿದೆ.
ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಬಂಧಿಸಿದ್ದರೆ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ ಯಾನೆಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ ಯಾನೆ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ(41) ಬಂಧಿಸಲಾಗಿತ್ತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಮತ್ತು ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳು ಉಡುಪಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ, ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್, ಇನ್ಸ್ಪೆಕ್ಟರ್ ಸಂಪತ್ ಕುಮಾರ್ ನೇತೃತ್ವದ ತಂಡಗಳು ಕ್ಷಿಪ್ರವಾಗಿ ಕಾರ್ಯಚರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.