ಉಡುಪಿ: ಡಿಸೆಂಬರ್ 3ರಂದು ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿದ್ದು, ಅಪಹರಣಕ್ಕೊಳಗಾಗಿರಬಹುದು ಎಂಬ ಶಂಕೆ ವ್ಯಕ್ತಿವಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾಗಿರುವ ಬಾಲಕರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ ತಂಗಿ ಮಂಗಳರ ಎಂಬವರ ಪುತ್ರ ವಿಷ್ಣು (9) ಎಂದು ಗುರುತಿಸಲಾಗಿದೆ.
ಶಾಲೆ ರಜೆ ಇದ್ದ ಕಾರಣ ಸಂತೋಷ್, ಮಂಗಳರ ಜೊತೆಗೆ ಉಡುಪಿಗೆ ಬಂದಿದ್ದನು. ಡಿ.3ರಂದು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಆಡುತ್ತಿದ್ದ ಸಂತೋಷ್ ಹಾಗೂ ವಿಷ್ಣು ದಿಢೀರ್ ಆಗಿ ಕಣ್ಮರೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದೀಗ ಈ ಇಬ್ಬರು ಬಾಲಕರನ್ನು ದುಷ್ಕರ್ಮಿಗಳು ಅಪಹರಣ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅದರಂತೆ ಡಿ. 7ರಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.