ಮೀನುಗಾರರ ಸಂಕಷ್ಠ ಪರಿಹಾರ ನಿಧಿಯ ಮೊತ್ತ ₹ 10 ಲಕ್ಷಕ್ಕೆ ಏರಿಸಲು ಪ್ರಮೋದ್ ಮಧ್ವರಾಜ್ ಆಗ್ರಹ

ಉಡುಪಿ: ಮೀನುಗಾರರ ಸಂಕಷ್ಠ ಪರಿಹಾರ ನಿಧಿಯ ಮೊತ್ತವನ್ನು ಕನಿಷ್ಠ ₹ 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಬೋಟ್ ದುರಂತದಲ್ಲಿ ಮಡಿದ ಆರು ಮಂದಿ ಮೀನುಗಾರರ ಆತ್ಮಕ್ಕೆ ಶಾಂತಿ ಕೋರಿದ ಅವರು, ಈ ಘಟನೆ ಅತ್ಯಂತ ನೋವಿನ ಸಂಗತಿಯಾಗಿದೆ. ಇನ್ಮುಂದೆ ಇಂತಹ ಘಟನೆ ನಡೆಯದಿರಲಿ ಮತ್ತು ಯಾವ ಮೀನುಗಾರನ ಜೀವಕ್ಕೂ ಪ್ರಾಣಾಪಾಯ ಸಂಭವಿಸದಿರಲಿ ಎಂದು ಸಮುದ್ರ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಅಗಲಿದ ಜೀವಕ್ಕೆ ಬೆಲೆ ಕಟ್ಟಲಾಗದು. ಸಂಕಷ್ಟದಲ್ಲಿ ಹೊಟ್ಟೆಪಾಡಿಗೆ ಸಮುದ್ರದಲ್ಲಿ ಜೀವಪಣಕಿಟ್ಟು ಹೋರಾಡಿ ಸಮುದ್ರದಲ್ಲಿ ಮಡಿದ ಜೀವವನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಸರಕಾರ ಗರಿಷ್ಟ ಪರಿಹಾರ ಧನ ಮಂಜೂರು ಮಾಡಿ ಅವರ ತಾತ್ಕಾಲಿಕ ಜೀವನೋಪಾಯಕ್ಕೆ ಸಹಾಯಮಾಡುವಂತೆ ಅವರು ಮನವಿ ಮಾಡಿದ್ದಾರೆ.

ನಾನು ಮೀನುಗಾರಿಕಾ ಸಚಿವನಾಗಿದ್ದ ಸಂದರ್ಭ ಇಂತಹ ಪರಿಸ್ಥಿತಿಯಲ್ಲಿ ಕುಟುಂಬದವರ ಬೆಂಬಲಕ್ಕಾಗಿ 2 ಲಕ್ಷ ರೂಪಾಯಿದ್ದ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ₹ 6 ಲಕ್ಷಕ್ಕೆ ಏರಿಸಿ ಸರಕಾರದ ವತಿಯಿಂದ ಆದೇಶ ಮಾಡಿಸಿ ನೊಂದ ಮೀನುಗಾರರ ಕುಟುಂಬಕ್ಕೆ ಆಧಾರ ನೀಡುವ ವ್ಯವಸ್ಥೆ ಮಾಡಿಸಿದ್ದೆನು.

ಮತ್ಸ್ಯಕ್ಷಾಮ ಮತ್ತು ಕೋರೊನಾ ಲಾಕ್ಡೌನ್ ನಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ನೆಲಕಚ್ಚಿರುವ ಉದ್ಯಮಗಳಲ್ಲಿ ಮೀನುಗಾರಿಕೆಯು ಒಂದಾಗಿದೆ. ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಅನುದಾನ ಬಿಡುಗಡೆಯ ಜತೆಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಮೊತ್ತವನ್ನು ಕನಿಷ್ಟ ₹ 10 ಲಕ್ಷಕ್ಕೆ ಏರಿಸುವಂತೆ ಮೀನುಗಾರಿಕಾ ಮಂತ್ರಿಗಳು ಮತ್ತು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.