ಉಡುಪಿ: ಉಡುಪಿ ಅಷ್ಟಮಠಗಳ ಪೈಕಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ ಕಾರ್ಯಕ್ರಮವು ನಾಳೆ (ನ. 30) ನಡೆಯಲಿದೆ.
ಕೃಷ್ಣಾಪುರ ಶ್ರೀಗಳಿಗೆ 4ನೇ ಪರ್ಯಾಯ:
ಕೃಷ್ಣಾಪುರದ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದರು. 2022-23ರ ಅವಧಿಗೆ ಅವರು ನಾಲ್ಕನೇ ಬಾರಿಗೆ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಆಶ್ರಮ ಜ್ಯೇಷ್ಠರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು ಕೃಷ್ಣನ ಪಾದ ಸೇರಿದ ಬಳಿಕ ವಿದ್ಯಾಸಾಗರತೀರ್ಥ ಸ್ವಾಮೀಜಿಯೇ ಆಶ್ರಮ ಜ್ಯೇಷ್ಠರಾಗಲಿದ್ದಾರೆ.
251ನೇ ಪರ್ಯಾಯ
ಸರಿ ಸುಮಾರು 1522ರಿಂದ ಈ ಪರ್ಯಾಯ ಪೂಜಾ ಪದ್ಧತಿ ಆಚರಣೆಯಲ್ಲಿದೆ. ಈ ಪರ್ಯಾಯ ಪೂಜಾ ಪದ್ಧತಿಗೆ 16 ವರ್ಷಗಳ 31 ಚಕ್ರಗಳು ಉರುಳಿವೆ. ಈಗ ನಡೆಯುತ್ತಿರುವುದು 250ನೇ ಪರ್ಯಾಯವಾಗಿದ್ದು, 32ನೇ ಪರ್ಯಾಯ ಚಕ್ರದಲ್ಲಿ 2ನೇಯದು. ಪ್ರಸ್ತುತ ಅದಮಾರು ಮಠದಿಂದ ನಡೆಯುತ್ತಿದ್ದು, ಇದು 499ನೇ ವರ್ಷದ ಪರ್ಯಾಯ ಆಗಿದೆ. 2022ರ ಜನವರಿ 18ರಂದು ಪರ್ಯಾಯ ಪೂಜಾ ಸರದಿಯನ್ನು ನಿರ್ವಹಿಸುವವರು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು. ಅಂದು ಐತಿಹಾಸಿಕವಾದ 501ನೇ ವರ್ಷ ಆರಂಭವಾಗಲಿದೆ.