ಕೂಡ್ಲು ಫಾಲ್ಸ್: ದುಬಾರಿ ಪ್ರವೇಶ ಶುಲ್ಕ ಆದೇಶ ಕೈಬಿಟ್ಟ ಇಲಾಖೆ

ಹೆಬ್ರಿ: ಸ್ಥಳೀಯರು ಹಾಗೂ ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕೂಡ್ಲು ಫಾಲ್ಸ್‌ನ ದುಬಾರಿ ಪ್ರವೇಶ ಶುಲ್ಕವನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ.

ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಅಭಯಾರಣ್ಯದಲ್ಲಿ ಇರುವ ಕೂಡ್ಲು ಫಾಲ್ಸ್‌ನ ಪ್ರವೇಶ ಶುಲ್ಕವನ್ನು ಕೊರೊನಾ ಲಾಕ್ ಡೌನ್ ಬಳಿಕ ₹ 50 ಬದಲು ಮೂರು ಪಟ್ಟು ಅಂದರೆ ₹ 200 ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು.

ನವೆಂಬರ್ ಮೊದಲ ವಾರದಿಂದ ಭಾರತೀಯರು ಒಬ್ಬರಿಗೆ ₹ 200, ಮಕ್ಕಳಿಗೆ ಒಬ್ಬರಿಗೆ ₹ 175, ವಿದೇಶಿಗರಿಗೆ ಒಬ್ಬರಿಗೆ ₹ 250 ಪ್ರವೇಶ ಶುಲ್ಕವನ್ನು ಪಡೆಯಲಾಗುತ್ತಿತ್ತು.

ಇಲಾಖೆಯ ಈ ನಿರ್ಧಾರಕ್ಕೆ ನಾಡ್ಪಾಲು ಗ್ರಾಮ ಅರಣ್ಯ ಸಮಿತಿ, ಪ್ರವಾಸಿಗರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಶುಲ್ಕವನ್ನೇ ಮುಂದುವರೆಸುವಂತೆ ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದರು.

ವಿರೋಧದ ಹಿನ್ನೆಲೆಯಲ್ಲಿ ಕೂಡ್ಲು ಫಾಲ್ಸ್‌ಗೆ ಹೆಚ್ಚಿಸಿರುವ ಪ್ರವೇಶ ಶುಲ್ಕವನ್ನು ರದ್ದುಗೊಳಿಸಿ ಚೀಫ್ ವೈಲ್ಡ್‌ಲೈಫ್ ವಾರ್ಡನ್ ಆದೇಶ ಹೊರಡಿಸಿದ್ದಾರೆ. ಅದರಂತೆ ನ.21ರಿಂದ ಕೊರೊನಾ ಲಾಕ್‌ಡೌನ್‌ಗೆ ಮೊದಲು ಇದ್ದ ಒಬ್ಬರಿಗೆ ₹ 50 ಮತ್ತು ಮಕ್ಕಳಿಗೆ ₹ 25 ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್‌ಗೆ ಪ್ರತ್ಯೇಕ ಶುಲ್ಕವನ್ನು ಮುಂದುವರಿಸಲಾಗಿದೆ’ ಎಂದು ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.