ಉಡುಪಿ ಜಿಲ್ಲೆಯ ಗುಂಡಿಬೈಲ್ ವಾರ್ಡ್ನಲ್ಲಿ ಇಂದು ವಿದ್ಯುತ್ ವಂಚಿತ ಕುಟುಂಬಕ್ಕೆ ಮತ್ತು ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬಿಜೆಪಿ ಗುಂಡಿಬೈಲ್ ವಾರ್ಡ್ ಮತ್ತು ನಮೋ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ತಂಡವು ಜನಪರ ಸೇವೆಗೆ ಸಾಕ್ಷಿಯಾಯಿತು.
ಮಲ್ಲಂಪಳ್ಳಿ ನಿವಾಸಿ ಶ್ರೀಮತಿ ಕಮಲ ಎಂಬವರ ಮನೆಗೆ ಮತ್ತು ಸಮೀಪದ ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ, ನಳ್ಳಿ ನೀರಿನ ವ್ಯವಸ್ಥೆಯ ಉದ್ಘಾಟನೆ, ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ ಹಾಗೂ ಗುಂಡಿಬೈಲ್ ವಾರ್ಡ್ ಬಿಜೆಪಿಯ ಕಛೇರಿ ಉದ್ಘಾಟನಾ ಸಮಾರಂಭವನ್ನು ರಘುಪತಿ ಭಟ್ ಅವರು ನೆರವೇರಿಸಿದರು. ಹಾಗೂ ಇದೇ ವೇಳೆ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ ನೋಂದಣಿ ಕೇಂದ್ರ ಮತ್ತು ಮಾಹಿತಿ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕರು, ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಇಂದು ದೇಶಾದ್ಯಂತ ಜಾರಿಗೊಳಿಸಿ ಕಾರ್ಯರೂಪಕ್ಕೆ ತರುವ ಮೂಲಕ ಆರೋಗ್ಯ ವಿಚಾರವಾಗಿ ವಿಶೇಷ ಕಾಳಜಿ ವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಆಯುಷ್ಮಾನ್ ಭಾರತ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವೂದ್ ಅಬೂಬಕರ್, ವಾರ್ಡ್ ಅಧ್ಯಕ್ಷರಾದ ಕಿಶೋರ್, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಟಿ.ಜಿ ಹೆಗ್ಡೆ, ವಿನಯ್ ಪೂಜಾರಿ, ನಗರ ಕಾರ್ಯದರ್ಶಿ ಜಗದೀಶ್ ಆಚಾರ್ಯ, ಕರಂಬಳ್ಳಿ ವಾರ್ಡ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಕಿಶೋರ್ ಕರಂಬಳ್ಳಿ ಉಪಸ್ಥಿತರಿದ್ದರು. ಸ್ಥಾನೀಯ ನಗರಸಭಾ ಸದಸ್ಯ ಪ್ರಭಾಕರ್ ಗುಂಡಿಬೈಲ್ ಇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಾಘವೇಂದ್ರ ಉಪ್ಪೂರು ಕಾರ್ಯಕ್ರಮ ನಿರೂಪಣೆ ಮಾಡಿದರು.